ಜಿಪಂ-ತಾಪಂ ಎಲೆಕ್ಷನ್​ಗೆ ಸೂರು ಹಂಚಿಕೆ ತಾಪತ್ರಯ; ವಸತಿ ಯೋಜನೆ ಮನೆಗಳಿಗೆ ಅನುದಾನ ಕೊರತೆ

Front 2
Published on

| ವಿಲಾಸ ಮೇಲಗಿರಿ ಬೆಂಗಳೂರು

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮುನ್ನ ಗ್ರಾಮೀಣ ಪ್ರದೇಶದ ನಾಲ್ಕು ಲಕ್ಷದಷ್ಟು ವಸತಿ ರಹಿತರಿಗೆ ಹೊಸ ಮನೆ ಮಂಜೂರು ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ಲೆಕ್ಕಾಚಾರ ಹೊಂದಿದ್ದ ಆಡಳಿತ ಪಕ್ಷಕ್ಕೆ ಬೆಟ್ಟದಷ್ಟು ಗೊಂದಲ, ಸರಣಿ ಸಮಸ್ಯೆಗಳು ಎದುರಾಗಿವೆ. ಅನುದಾನದ ಕೊರತೆಯಿಂದ ಸಹಸ್ರಾರು ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿರುವುದರಿಂದ ಮನೆ ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ.

ದೇವರಾಜ ಅರಸು ವಸತಿ ಯೋಜನೆಯಡಿ 40 ಸಾವಿರ ಮನೆ ಹಂಚಿಕೆಯಾದರೆ 20 ಸಾವಿರ ಮನೆ ಅನುಮೋದನೆ ಬಾಕಿಯಿದೆ. ಕೆಲವೆಡೆ ಮನೆ ಹಂಚಿಕೆ, ಕಾಮಗಾರಿ ಅನುಷ್ಠಾನದಲ್ಲಿ ಅವ್ಯವಸ್ಥೆ, ಗೊಂದಲ, ಅವ್ಯವಹಾರದ ಆರೋಪ ಕೇಳಿ ಬಂದಿವೆ. ನೋಂದಣಿ, ಕಾಮಗಾರಿ, ಅರ್ಹ ಫಲಾನುಭವಿ ಆಯ್ಕೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿರುವುದು, ಆದಾಯ ಹೆಚ್ಚಿದ್ದರೂ ಕಡಿಮೆ ಆದಾಯ ಪ್ರಮಾಣ ಪತ್ರ ನೀಡಿರುವುದು, ದಾಖಲೆ ಸ್ಥಳದ ಬದಲು ಬೇರೆ ಕಡೆ ಮನೆ ನಿರ್ಮಾಣ ಆಗಿದೆ. 2010ರಿಂದ ವಿವಿಧ ಯೋಜನೆಯಡಿ ಕೆಲವು ಕಂತುಗಳ ಅನುದಾನ ಪಡೆದು ಊರು ಬಿಟ್ಟು ಹೋಗಿರುವ, ಮೃತರಾಗಿರುವ, ವಿಚ್ಛೇದಿತರಾಗಿರುವ, ಅನುದಾನ ಪಡೆದು ಬೇರೆ ಮನೆ ಕಟ್ಟಿಕೊಂಡಿರುವ ಪ್ರಕರಣಗಳೂ ರಾಜೀವ್ ಗಾಂಧಿ ವಸತಿ ನಿಗಮದ ಗಮನಕ್ಕೆ ಬಂದಿವೆ. ಹೊಸ 4 ಲಕ್ಷ ಮನೆ ಗುರಿಗೆ ಫಲಾನುಭವಿ ಆಯ್ಕೆಗಾಗಿ ಮಾರ್ಗಸೂಚಿ ಹೊರಡಿಸಿದ್ದರೂ ಆಕ್ಷೇಪ ವ್ಯಕ್ತವಾಗಿವೆ. ನಿಯಮ ಉಲ್ಲಂಘಿಸಿ, ಕೋರ್ಟ್ ಆದೇಶ ಧಿಕ್ಕರಿಸಿ ಫಲಾನುಭವಿ ಆಯ್ಕೆಗೆ ಸರ್ಕಾರ ಮುಂದಾಗಿದೆ ಎಂಬ ಟೀಕೆ ಕೇಳಿ ಬರುತ್ತಿವೆ. ಗ್ರಾಪಂ ಚುನಾಯಿತ ಪ್ರತಿನಿಧಿಗಳ ಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳ ಗುರಿಯನ್ನು ಎ,ಬಿ,ಸಿ ಎಂದು ವರ್ಗೀಕರಿಸಿ ಜ.20ರ ಒಳಗಾಗಿ ವಸತಿ ರಹಿತರ ಪಟ್ಟಿ ಪರಿಶೀಲಿಸಿ ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಿ ಕಳುಹಿಸುವಂತೆ ಆದೇಶಿಸಿದೆ. ಸರ್ಕಾರ ಇಷ್ಟೊಂದು ತರಾತುರಿ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ತಲೆ ಎತ್ತಿದೆ.

3196.12 ಎಕರೆ ಲಭ್ಯ: ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಹಂಚಿಕೆಗೆ ಒಟ್ಟು 3196.12 ಎಕರೆ ಜಮೀನು ಲಭ್ಯವಿದೆ. ಇದರಲ್ಲಿ 63,922 ನಿವೇಶನ ಹಂಚಿಕೆ ಮಾಡಲು ಅವಕಾಶವಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ನಿವೇಶನ ಹಂಚಿಕೆಗೆ ಅವಕಾಶವಿದೆ.

ಸಮಸ್ಯೆಗಳೇನು?

* ಅನೇಕ ಫಲಾನುಭವಿಗಳು ಕಂದಾಯ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುತ್ತಿರುವುದರಿಂದ ಅಡಮಾನ ಮಾಡಲು, ಇ-ಸ್ವತ್ತು ಖಾತೆ ಮತ್ತು ಕಂದಾಯ ಭೂಮಿ ನಕ್ಷೆ ಪಡೆಯಲು ಸ್ಪಷ್ಟ ಮಾರ್ಗಸೂಚಿ ಇಲ್ಲ

* ಹಿಂದಿನ ಆಡಳಿತ ಮಂಡಳಿ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿ ಮತ್ತು ಹೊಸ ಆಡಳಿತ ಮಂಡಳಿ ಗ್ರಾಮಸಭೆಯಲ್ಲಿ ಆಯ್ಕೆ ಮಾಡುವ ಸಂದರ್ಭದಲ್ಲಿ ಗೊಂದಲವಾಗುವ ಸಂಭವವಿದ್ದು, ಇದರ ಬಗ್ಗೆ ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇಲ್ಲ

* ಫಲಾನುಭವಿ ಆಯ್ಕೆಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರದ ಶಾಸಕರು/ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ಕಡ್ಡಾಯವಾಗಿ ತರುವಂತೆ ಸೂಚಿಸಿರುವುದರಿಂದ ಶಾಸಕರು ನೀಡುವ ಪಟ್ಟಿ ಮತ್ತು ಗ್ರಾಮ ಸಭೆ ಆಯ್ಕೆ ಮಾಡುವ ಪಟ್ಟಿಯಲ್ಲಿ ಗೊಂದಲ ಏರ್ಪಡುವ ಸಾಧ್ಯತೆಗಳಿವೆ

* ಫಲಾನುಭವಿಗಳ ಆಯ್ಕೆಯನ್ನು ಶಾಸಕರ ಬದಲಾಗಿ ಗ್ರಾಮಸಭೆಗೆ ಅಧಿಕಾರ ನೀಡುವಂತೆ ಹಿಂದೆಯೇ ಉಚ್ಛನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೂ ಶಾಸಕರ ಹಸ್ತಕ್ಷೇಪವೇಕೆ?

* ಕಂದಾಯ ಇಲಾಖೆಯಿಂದ 32 ಸಾವಿರಕ್ಕಿಂತ ಹೆಚ್ಚಿನ ಆದಾಯ ಪ್ರಮಾಣ ಪತ್ರ ನೀಡುತ್ತಿರುವುದರಿಂದ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಹಾಗೂ ನಗರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳ ಫಲಾನುಭವಿಗಳಿಗೆ ಆದಾಯ ಪ್ರಮಾಣ ಏರಿಕೆ ಅಗತ್ಯವಿದೆ

* ವಸತಿ ಯೋಜನೆಯ ಸಮಸ್ಯೆಗಳು ಮತ್ತು ಸ್ಪಷ್ಟೀಕರಣಕ್ಕಾಗಿ ಗ್ರಾಮ ಪಂಚಾಯಿತಿ ಮತ್ತು ವಸತಿ ನಿಗಮದ ಮಧ್ಯೆ ಹೆಲ್ಪ್ ಲೈನ್ ಅವಶ್ಯಕತೆಯಿದೆ.

* ಗುರಿಯನ್ನು ಕಡಿಮೆಗೊಳಿಸಿ ಫಲಾನುಭವಿಗಳಿಗೆ ನೀಡುವ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಇದೆ.

* ಫಲಾನುಭವಿಗಳ ಆಯ್ಕೆಗೆ 6 ತಿಂಗಳ ಮೊದಲೇ ದಾಖಲೆಯೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು.

ಎಲ್ಲಿ, ಏನಿದೆ ಪರಿಸ್ಥಿತಿ?

ಗ್ರಾಮೀಣ ಪ್ರದೇಶದಲ್ಲಿ ಪ್ರಗತಿಯಲ್ಲಿರುವ 4,16,128 ಮನೆಗಳ ಪೈಕಿ ಗೋಡೆ ಹಂತದಲ್ಲಿ 90,630, ಛಾವಣಿ ಮಟ್ಟದಲ್ಲಿ 1,13,059 ಮನೆಗಳಿವೆ. ಅತಿ ಹೆಚ್ಚು ಗೋಡೆ, ಛಾವಣಿ ಹಂತದ ಮನೆಗಳಿರುವ ಜಿಲ್ಲೆಗಳು ಹೀಗಿವೆ.

ತಳಪಾಯ ಹಂತದಲ್ಲಿ 1,65,512 ಮನೆಗಳು ಮತ್ತು 46,927 ಮನೆಗಳಿದ್ದು, ಈ ಮನೆಗಳನ್ನು ಕ್ರಮವಾಗಿ ಮಾರ್ಚ್ ಮತ್ತು ಜನವರಿ ಅಂತ್ಯದ ಒಳಗೆ ಪೂರ್ಣಗೊಳಿಸಲು ಸರ್ಕಾರ ಸೂಚಿಸಿದೆ.

ಆಯ್ಕೆ ಪಟ್ಟಿಗೆ ನಿರ್ದೇಶನ: ಹೊಸದಾಗಿ ಮನೆ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಮಾಡದೇ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ಹಾಗಾಗಿ ತರಾತುರಿಯಲ್ಲಿ ಫಲಾನುಭವಿ ಆಯ್ಕೆ ಪಟ್ಟಿ ತಯಾರಿಸಲು ನಿರ್ದೇಶನ ನೀಡಿದೆ.

ಅನುಮೋದನೆಗೆ ಬಾಕಿ: ಅಲೆಮಾರಿ/ಅರೆ ಅಲೆಮಾರಿ/ಕಾಡುಗೊಲ್ಲ ಸಮುದಾಯದವರಿಗೆ ದೇವರಾಜ ಅರಸು ವಸತಿ ಯೋಜನೆಯಡಿ 2020-21ನೇ ಸಾಲಿನಲ್ಲಿ 40,138 ಮನೆಗಳ ಗುರಿ ನೀಡಲಾಗಿದೆ. ಆದರೆ, ಆಯ್ಕೆ ಮತ್ತು ಅನುಮೋದನೆ ಪಡೆದುಕೊಳ್ಳಲು ಸುಮಾರು 20 ಸಾವಿರ ಮನೆಗಳು ಬಾಕಿ ಇವೆ!

ಜಿಲ್ಲಾವಾರು ಬಾಕಿ: ಚಿತ್ರದುರ್ಗ: 7111; ತುಮಕೂರು:6139; ಬೀದರ್:2500; ರಾಯಚೂರು:2500; ವಿಜಯನಗರ: 2300; ಬಳ್ಳಾರಿ: 520.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net