ಟ್ಯಾಕ್ಸ್ ವಂಚನೆಗೆ ಕೈಜೋಡಿಸಿದವರಿಗೆ ಕಂಟಕ; ಆರ್​ಟಿಒ ಅಧಿಕಾರಿಗಳು, ವಾಹನ ಮಾಲೀಕರಿಗೆ ಸಂಕಷ್ಟ

Tax Dhokha
Published on

ಬೆಂಗಳೂರು: ಐಷಾರಾಮಿ ಕಾರುಗಳ ಕೋಟ್ಯಂತರ ರೂ. ರಸ್ತೆ ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರ್​ಟಿಒ ಅಧಿಕಾರಿಗಳು, ಸಿಬ್ಬಂದಿ, ಕೇಸ್ ವರ್ಕರ್​ಗಳಿಗೆ ಮತ್ತು ವಾಹನ ಮಾಲೀಕರಿಗೆ ಈಗ ಸಿಐಡಿ ಭೀತಿ ಶುರುವಾಗಿದೆ. ಸದ್ಯ ಕೋರಮಂಗಲ (ಕೇಂದ್ರ) ಆರ್​ಟಿಒ ಕಚೇರಿಯಲ್ಲಿ ನಡೆದಿರುವ ವಂಚನೆ ಪ್ರಕರಣವನ್ನು ಮಾತ್ರ ಸಿಐಡಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ತನಿಖೆ ಆರಂಭವಾದರೆ ಬೆಂಗಳೂರಿನ ಬೇರೆ ಆರ್​ಟಿಒ ಕಚೇರಿಗಳಿಗೂ ವಂಚನೆ ಕಳ್ಳಾಟವೂ ಬಯಲಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ತೆರಿಗೆ ಪಾವತಿಸದಿರುವ ಬಗ್ಗೆ ಆರ್​ಟಿಒ ಅಧಿಕಾರಿಗಳು ಕೊಟ್ಟಿದ್ದ ನೋಟಿಸ್ ರದ್ದುಕೋರಿ ಈಗಾಗಲೆ ಕೆಲ ವಾಹನ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ತೆರಿಗೆ ಪಾವತಿಸಿರುವ ದಾಖಲಾತಿಗಳನ್ನು ಒದಗಿಸಿ ಆರ್​ಟಿಒ ಹಂತದಲ್ಲೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಪೀಠ ಸೂಚನೆ ಕೊಟ್ಟಿದೆ. ಆರ್​ಟಿಒ ಅಧಿಕಾರಿಗಳ ಪರಿಶೀಲನೆ ಪ್ರಗತಿಯಲ್ಲಿ ಇರುವಾಗಲೇ ಪ್ರಕರಣ ಸಿಐಡಿ ತನಿಖೆಗೆ ಹೋಗುತ್ತಿದ್ದು, ವಾಹನ ಜಪ್ತಿ ಮಾಡಿ, ಬಂಧಿಸುವ ಸಾಧ್ಯತೆ ಬಗ್ಗೆ ಮಾಲೀಕರಲ್ಲಿ ಭಯ ಶುರುವಾಗಿದೆ.

ಬಹುತೇಕ ಮಾಲೀಕರು ವಾಹನ ಖರೀದಿಸುವಾಗಲೇ ತೆರಿಗೆ ಪಾವತಿಸಿರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ವಾಹನ ಮಾಲೀಕರಿಂದ ಪಡೆದ ಹಣವನ್ನು ಶೋರೂಂ ಡೀಲರ್​ಗಳು ಹಾಗೂ ಆರ್​ಟಿಒ ಅಧಿಕಾರಿಗಳು ಸರ್ಕಾರಕ್ಕೆ ಪಾವತಿಸದೆ ಗುಳುಂ ಮಾಡಿರುವ ಸಾಧ್ಯತೆ ಇದ್ದು, ಸಿಐಡಿ ತನಿಖೆಯಲ್ಲಿ ಸಿಕ್ಕಿ ಬೀಳಲಿದ್ದಾರೆ. ತೆರಿಗೆ ಪಾವತಿ ದಾಖಲೆ ಹೊಂದಿರುವ ವಾಹನ ಮಾಲೀಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ರವಿಶಂಕರ್ ಪ್ರಮುಖ ಆರೋಪಿ?: ಕೋರಮಂಗಲ ಹಾಗೂ ಜಯನಗರ ಆರ್​ಟಿಒದಲ್ಲಿ ಎಸ್​ಡಿಎ ಆಗಿದ್ದ ರವಿಶಂಕರ್ ಟ್ಯಾಕ್ಸ್ ವಂಚನೆಯ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ. ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ರವಿಶಂಕರ್ ಕೆಲಸದಿಂದ ವಜಾಗೊಂಡಿದ್ದಾನೆ. ಸಿಐಡಿ ಪೊಲೀಸರು ಆತನನ್ನೂ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ. ಅಲ್ಲದೆ, ಸೋರಿಕೆಯಾಗಿರುವ ರವಿಶಂಕರ್ ಜತೆ ಮಾತನಾಡಿರುವ ಆಡಿಯೋ ಹಲವು ಅಧಿಕಾರಿ ಮತ್ತು ಸಿಬ್ಬಂದಿಗೆ ಮುಳುವಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net