ಪ್ರತಿ ಬೂತ್‌ನಲ್ಲೂ ಬಿಜೆಪಿ ಪರ ಅಲೆ

aaraga
ಆರಗ ಜ್ಞಾನೇಂದ್ರ
Published on

ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರತಿ ಬೂತ್‌ನಲ್ಲೂ ಬಿಜೆಪಿ ಪರ ವಾತಾವರಣವಿದ್ದು, ಕಳೆದ ಬಾರಿಗಿಂತ ಅಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಮ್ಮ ಪಕ್ಷದ ಹತ್ತಿರ ಸುಳಿಯಲೂ ಸಾಧ್ಯವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

2004ರಿಂದ 2014ರವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷ 400 ಸ್ಥಾನಗಳಿಂದ 40 ಸ್ಥಾನಕ್ಕೆ ಇಳಿದಿದೆ. ಅಲ್ಲದೆ ಆಡಳಿತದಲ್ಲಿದ್ದಾಗ ರಾಷ್ಟ್ರದ ಐಕ್ಯತೆ ವಿಚಾರದಲ್ಲಿ ಚಕಾರ ಎತ್ತಿರಲಿಲ್ಲ. ಈಗ ಜಗತ್ತಿನಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಕೋಣಂದೂರಿನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೆಡಿಎಸ್ ಬೆಂಬಲದಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇದರಿಂದ ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿಯಲ್ಲೂ ನಮಗೆ ಲೀಡ್ ದೊರೆಯುತ್ತದೆ. ಮೋದಿ ಮತ್ತೊಮ್ಮೆ ಪ್ರದಾನಿ ಆಗಬೇಕೆಂಬ ಉತ್ಸಾಹದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಒಂದಾಗಿ ಸಮರೋಪಾದಿಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಂಸದರಾಗಿ ಬಿ.ವೈ.ರಾಘವೇಂದ್ರ ಮಾಡಿರುವ ಅಭಿವೃದ್ಧಿ ಬಗ್ಗೆ ಪಕ್ಷಾತೀತವಾಗಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 30 ಸಾವಿರ ಮತಗಳ ಲೀಡ್ ಬಂದಿತ್ತು. ಈ ಬಾರಿ 50 ಸಾವಿರ ಮತಗಳ ಬಹುಮತ ದೊರೆಯಲಿದೆ. ಅತಿ ದೊಡ್ಡ ಮಟ್ಟದ ಅಂತರದಲ್ಲಿ ಗೆಲುವು ನಮ್ಮದಾಗಲಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ಮಾತನಾಡಿ, ಸೋಲಿನ ಭಯದಿಂದ ಹತಾಶರಾಗಿರುವ ಕಾಂಗ್ರೆಸ್ ಮುಖಂಡರು ಪೆನ್‌ಡ್ರೈವ್ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಹೆದ್ದೂರು ನವೀನ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ನಾಗರಾಜ್, ಸಾಲೇಕೊಪ್ಪ ರಾಮಚಂದ್ರ, ಮೇಧೋಳಿಗೆ ರಾಮಸ್ವಾಮಿ, ರಾಘವೇಂದ್ರ ನಾಯಕ್, ಕುಂದಾ ಪ್ರವೀಣ್, ಸಂದೇಶ್ ಜವಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net