ಪ್ರಿಯಾಂಕ ಗಾಂಧಿ ನಾಮಪತ್ರ ಸ್ವೀಕಾರ! ಆಸ್ತಿ ಮಾಹಿತಿ ಇನ್ನೂ ಅಪೂರ್ಣ: ಬಿಜೆಪಿ ಆರೋಪ | By Election

By election
Published on

ಕೇರಳ: ವಯನಾಡು ಉಪ ಚುನಾವಣೆ (By Election) ಕದನದ ಅಖಾಡಕ್ಕಿಳಿದಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ಇಂದು ತಮ್ಮ ನಾಮಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಪ್ರಿಯಾಂಕಾ ಅವರ ನಾಮಪತ್ರ ರದ್ದುಗೊಳಿಸಬೇಕು. ಇದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಆಕೆಯ ಆಸ್ತಿ ಮಾಹಿತಿ ಇನ್ನೂ ಪೂರ್ಣವಾಗಿಲ್ಲ. ಹೀಗಿರುವಾಗ ಇದು ಹೇಗೆ ಸಾಧ್ಯ? ಈ ಕೂಡಲೇ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂಬ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ನಾಮಪತ್ರವನ್ನು ಇಂದು ಅಂಗೀಕರಿಸಲಾಯಿತು. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅವರ ನಾಮಪತ್ರ ಸ್ವೀಕರಿಸಿದರು. ಪ್ರಿಯಾಂಕಾ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದ ಎನ್‌ಡಿಎ ಅಭ್ಯರ್ಥಿ ನವ್ಯಾ ಹರಿದಾಸ್, ಇಂದು ಪ್ರಿಯಾಂಕಾ ವಿರುದ್ಧ ದೂರು ದಾಖಲಿಸಿದ್ದಾರೆ.

ಸುಳ್ಳು ಮಾಹಿತಿ ನೀಡುವುದು ಅಪರಾಧ

ಪ್ರಿಯಾಂಕಾ ಆಸ್ತಿ ಮಾಹಿತಿ ಪೂರ್ಣವಾಗಿಲ್ಲ ಎಂಬ ದೂರಿಗೆ ಬಿಜೆಪಿ ಈಗಾಗಲೇ ಮುಂದಾಗಿದೆ. ಸ್ಟಾಕ್ ಮಾಹಿತಿ ಮತ್ತು ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡುವುದು ಮತ್ತು ಸುಳ್ಳು ಮಾಹಿತಿ ನೀಡುವುದು ಅಪರಾಧ ಎಂದು ದೂರಿನಲ್ಲಿ ನವ್ಯಾ ಹರಿದಾಸ್ ಉಲ್ಲೇಖಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ನಾಮಪತ್ರವನ್ನು ಅಂಗೀಕರಿಸಬಾರದು ಎಂದು ಇಲ್ಲಿ ಒತ್ತಾಯಿಸಿದ್ದಾರೆ.

ಅಧಿಕೃತವಾಗಿ ಹೇಳಲಾಗಿದೆ

ಕಾಂಗ್ರೆಸ್ ಮತ್ತು ಪ್ರಿಯಾಂಕಾ ಗಾಂಧಿ ಜನರನ್ನು ವಂಚಿಸುತ್ತಿದ್ದು, ಅವರಿಬ್ಬರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅವರ ಆಸ್ತಿ ಮಾಹಿತಿಯ ಬಗ್ಗೆ ಅಧಿಕೃತವಾಗಿ ಹೇಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಕೂಡ ಈ ವಿಚಾರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಒಟ್ಟು ಆಸ್ತಿ ಮೌಲ್ಯ ಎಷ್ಟು?

ನಾಮಪತ್ರದ ಜತೆಗೆ ಪ್ರಿಯಾಂಕಾ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರ ಒಟ್ಟು ಆಸ್ತಿಯ ವಿವರಗಳು ಇದೀಗ ಬಹಿರಂಗವಾಗಿದೆ. ಅಫಿಡವಿಟ್ ಪ್ರಕಾರ ಒಟ್ಟು ಆಸ್ತಿ ಮೌಲ್ಯ 11.98 ಕೋಟಿ ರೂಪಾಯಿ. ಇದರಲ್ಲಿ 4,24,78,689 ರೂ. ಅವರ ಬ್ಯಾಂಕ್ ಠೇವಣಿ ಮತ್ತು ಚಿನ್ನಾಭರಣದ್ದಾಗಿದೆ. ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಾಲ್ಕು ಎಕರೆ ಜಮೀನಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪ್ರಿಯಾಂಕಾಗೆ ಮನೆಯಿದೆ. ಜಮೀನು, ಮನೆ ಸೇರಿದಂತೆ 7.74 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಉಲ್ಲೇಖವಾಗಿದೆ.

ಆದಾಯ 13 ಲಕ್ಷ ರೂ.ಗೆ ಇಳಿಕೆ

ಇದರೊಟ್ಟಿಗೆ ಕಳೆದ ಐದು ವರ್ಷಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಆದಾಯದಲ್ಲಿ 13 ಲಕ್ಷ ರೂಪಾಯಿ ಕಡಿಮೆಯಾಗಿದೆ. ಅವರ ಪತಿ ರಾಬರ್ಟ್ ವಾದ್ರಾ ಅವರ ಆದಾಯದಲ್ಲೂ 40 ಲಕ್ಷ ರೂಪಾಯಿ ಇಳಿಕೆಯಾಗಿದ್ದು, ರಾಬರ್ಟ್ ಒಟ್ಟು ಆಸ್ತಿ ಮೌಲ್ಯ 37 ಕೋಟಿ ರೂ. ಇದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net