ಎಲ್ಲವನ್ನೂ ಬೇರೆಯವರೇ ಮಾಡ್ತಾರೆ; ಕಲಾವಿದರಿಗೆ ಹೆಚ್ಚು ಕೆಲಸವಿಲ್ಲ ಎಂದ ಪ್ರಿಯಾಂಕಾ ಚೋಪ್ರಾ

Priyanka Chopra 3
Published on

ಲಂಡನ್​: 'ಒಬ್ಬರು ಡ್ರೆಸ್​ ಹಾಕುತ್ತಾರೆ. ಇನ್ನೊಬ್ಬರು ಮೇಕಪ್​ ಮಾಡುತ್ತಾರೆ, ಮತ್ತೊಬ್ಬರು ಹೇರ್​ಸ್ಟೈಲ್​ ಮಾಡುತ್ತಾರೆ. ಹಾಗಿರುವಾಗ ನಾನೇನು ಮಾಡುತ್ತಿದ್ದೇನೆ? ನಿಜ ಹೇಳಬೇಕೆಂದರೆ ಕಲಾವಿದರಿಗೆ ಹೆಚ್ಚು ಕೆಲಸವಿಲ್ಲ ...'

ಹಾಗಂತ ಹೇಳಿರುವುದು ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಚಿತ್ರರಂಗದಲ್ಲಿ ಕಲಾವಿದರಿಗೆ ಬಹಳ ಮಹತ್ವದ ಕೊಡಲಾಗುತ್ತದೆ. ಆದರೆ, ಅವರನ್ನು ರೂಪಿಸುವುದರ ಹಿಂದೆ ಹಲವು ಜನರು ಇರುತ್ತಾರೆ ಎಂದು ಹೇಳಿದ್ದಾರೆ.

'ಚಿತ್ರರಂಗದಲ್ಲಿ ಕಲಾವಿದರಿಗೆ ಬಹಳ ಮಹತ್ವ ಮತ್ತು ಕ್ರೆಡಿಟ್​ ಕೊಡಲಾಗುತ್ತದೆ. ನಿಜ ಹೇಳಬೇಕೆಂದರೆ, ಅವರು ಹೆಚ್ಚೇನು ಕೆಲಸ ಮಾಡುವುದಿಲ್ಲ. ಕಥೆ ಯಾರೋ ಬರೆದಯುತ್ತಾರೆ. ಸಂಭಾಷಣೆ ಯಾರೋ ಬರೆಯುತ್ತಾರೆ. ಯಾರೋ ನೃತ್ಯ ಹೇಳಿಕೊಡುತ್ತಾನೆ. ಇನ್ಯಾರೋ ಫೈಟ್​ ಮಾಡಿಸುತ್ತಾರೆ. ಒಬ್ಬರು ಡ್ರೆಸ್​ ಹಾಕುತ್ತಾರೆ. ಇನ್ನೊಬ್ಬರು ಮೇಕಪ್​ ಮಾಡುತ್ತಾರೆ, ಮತ್ತೊಬ್ಬರು ಹೇರ್​ಸ್ಟೈಲ್​ ಮಾಡುತ್ತಾರೆ. ಹಾಗಿರುವಾಗ ನಾನೇನು ಮಾಡುತ್ತಿದ್ದೇನೆ? ಎಂಬ ಪ್ರಶ್ನೆ ಎದುರಾಗುತ್ತದೆ. ನನ್ನ ಕೆಲಸವೇನಿದ್ದರೂ ಆಕ್ಷನ್​ ಮತ್ತು ಕಟ್​ ನಡುವೆ ಬರುತ್ತದೆ. ಬೇರೆಯವರ ಪಾತ್ರ ಮತ್ತು ಕೊಡುಗೆ ನೋಡಿದರೆ ಕಲಾವಿದರ ಕೊಡುಗೆ ಬಹಳ ಕಡಿಮೆ ಎನಿಸುತ್ತದೆ' ಎಂದು ಹೇಳಿದ್ದಾರೆ ಪ್ರಿಯಾಂಕಾ.

ಅಷ್ಟಾದರೂ ಕಲಾವಿದನಾಗುವುದು ಸುಲಭವಲ್ಲ ಎಂಬುದು ಪ್ರಿಯಾಂಕಾ ಅಭಿಪ್ರಾಯ. 'ಯಾರು ಎಷ್ಟೇ ಸಹಾಯ ಮಾಡಿದರೂ, ಅಂತಿಮವಾಗಿ ಒಂದು ಪಾತ್ರಕ್ಕೆ ಜೀವ ತುಂಬಬೇಕಾದವರು ಕಲಾವಿದರೇ' ಎಂದು ಅವರು ಹೇಳಿದ್ದಾರೆ.

ಸದ್ಯ ರಸ್ಸೋ ಸಹೋದರರ 'ಸಿಟಾಡೆಲ್​'ನಲ್ಲಿ ನಟಿಸಿರುವ ಪ್ರಿಯಾಂಕಾ ಸದ್ಯದಲ್ಲೇ 'ಜೀ ಲೇ ಜರಾ' ಎಂಬ ಚಿತ್ರದ ಮೂಲಕ ಬಾಲಿವುಡ್​ಗೆ ವಾಪಸ್ಸಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net