

ರಾಂಚಿ: ಆಘಾತಕಾರಿ ಘಟನೆಯೊಂದರಲ್ಲಿ ಖಾಸಗಿ ಶಾಲೆಯ ಪ್ರಾಂಶುಪಾಲನೋರ್ವ (Principal) ಪೆನ್ ಡೇ ಆಚರಿಸಿದ್ದಕ್ಕೆ 80ಕ್ಕೂ ಅಧಿಕ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿರುವ ಘಟನೆ ಜಾರ್ಖಂಡ್ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ.
ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ವಾಡಿಹ್‌ನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ತಮ್ಮ ಮೈಮೇಲೆ ಶರ್ಟ್ ಇಲ್ಲದೆ ಬ್ಲೇಝರ್‌ನಲ್ಲೇ ಮನೆಗೆ ಮರಳುವಂತೆ ಮಾಡಲಾಗಿದೆ. ಧನ್‌ಬಾದ್ ಡೆಪ್ಯುಟಿ ಕಮಿಷನರ್ ಮಾಧ್ವಿ ಮಿಶ್ರಾ ತನಿಖೆಗೆ ಆದೇಶಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿ ಮಾಧ್ವಿ ಮಿಶ್ರಾ, 10 ತರಗತಿಯ ವಿದ್ಯಾರ್ಥಿನಿಯರು ತಮ್ಮ ಪರೀಕ್ಷೆಗಳು ಮುಕ್ತಾಯಗೊಂಡ ಸಂಭ್ರಮವನ್ನು ಆಚರಿಸಲು ಪರಸ್ಪರ ತಮ್ಮ ಶರ್ಟ್‌ಗಳ ಮೇಲೆ ಸಂದೇಶಗಳನ್ನು ಬರೆದುಕೊಂಡು ಪೆನ್ ಡೇ ಆಚರಿಸಿದ್ದರು. ವಿದ್ಯಾರ್ಥಿನಿಯರ ಸಂಭ್ರಮಾಚರಣೆಗೆ ಆಕ್ಷೇಪಿಸಿದ ಪ್ರಾಂಶುಪಾಲರು (Principal), ಶರ್ಟ್ಗಳನ್ನು ತೆಗೆಯುವಂತೆ ಸೂಚಿಸಿದ್ದು, ಬ್ಲೇಝರ್‌ನಲ್ಲೇ ಮನೆಗೆ ತೆರಳಿದ್ದಾರೆ.
ವಿದ್ಯಾರ್ಥಿನಿಯರ ಪೋಷಕರು ನೀಡಿರುವ ದೂರನ್ನು ಆಧರಿಸಿ ತನಿಖೆಗೆ ಆದೇಶಿಸಲಾಗಿದ್ದು, ಸಮಿತಿಯೊಂದನ್ನು ರಚಿಸಲಾಗಿದೆ. ಅಧಿಕಾರಿಗಳು ನೀಡುವ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಮಾಧ್ವಿ ಮಿಶ್ರಾ ತಿಳಿಸಿದ್ದಾರೆ.