ಸೋಂಕಿತರಿಂದ ಸುಲಿಗೆ ಮಾಡಿದ್ದ ಹಣ ವಾಪಸ್: ಸರ್ಕಾರಿ ಅಧಿಕಾರಿಗಳ ಎಚ್ಚರಿಕೆಗೆ ಬೆಚ್ಚಿದ ಖಾಸಗಿ ಆಸ್ಪತ್ರೆ

Private hospital
Published on

ಬೆಂಗಳೂರು: ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿ ಚಿಕಿತ್ಸೆ ನೆಪದಲ್ಲಿ ಕರೊನಾ ಸೋಂಕಿತರಿಂದ ಹೆಚ್ಚಿನ ಹಣ ಪಡೆದಿದ್ದ ಖಾಸಗಿ ಆಸ್ಪತ್ರೆಗಳಿಗೆ ಹಿರಿಯ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಹಾಗೂ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇತೃತ್ವದ ತಂಡ ಎಚ್ಚರಿಕೆ ನೀಡಿದ ಬೆನ್ನಲ್ಲೇ, ರಾಜರಾಜೇಶ್ವರಿನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ 22 ರೋಗಿಗಳಿಂದ ವಸೂಲಿ ಮಾಡಿದ್ದ 24 ಲಕ್ಷ ರೂ.ಗಳನ್ನು ರೋಗಿಗಳಿಗೆ ವಾಪಸ್ ನೀಡಿದೆ.

ಖಾಸಗಿ ಆಸ್ಪತ್ರೆಗಳು ಕರೊನಾ ಸೋಂಕಿತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರು ಬಂದಿದ್ದವು. ಸೋಂಕು ಸಂಪೂರ್ಣ ವಾಸಿಯಾಗಲು ಚಿಕಿತ್ಸೆಗೆ 4-5 ಲಕ್ಷ ರೂ. ವೆಚ್ಚವಾಗಲಿದೆ ಎಂದು ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಚಿಕಿತ್ಸೆಗೆ ದಾಖಲಿಸಿಕೊಳ್ಳಲು ಮುಂಗಡವಾಗಿ 1 ರಿಂದ 2 ಲಕ್ಷ ರೂ. ಪಡೆಯುತ್ತಿದ್ದರು. ಈ ಕುರಿತು ಸಿಕ್ಕ ಮಾಹಿತಿ ಆಧರಿಸಿ ಜು. 23ರ ರಾತ್ರಿ ರೂಪಾ ಹಾಗೂ ಹರ್ಷಗುಪ್ತಾ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸೋಂಕಿತರಿಂದ ಹೆಚ್ಚಿನ ಹಣ ವಸೂಲಿ ಮಾಡಿರುವುದು ದಾಖಲೆ ಸಮೇತ ಪತ್ತೆಯಾಗಿತ್ತು. ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರ ಖಾತೆಗೆ ಆಸ್ಪತ್ರೆ 24 ಲಕ್ಷ ರೂ. ಜಮಾ ಮಾಡಿದೆ. ಇನ್ನು ಕೆಲವರಿಗೆ ಶೀಘ್ರದಲ್ಲಿ ಹಣ ಮರಳಿಸಲಿದೆ.

ಜನರಿಂದ ಶ್ಲಾಘನೆ

ಕರೊನಾ ಸೋಂಕಿತರಿಂದ ಹಣ ಸುಲಿಗೆ ಮಾಡಿದ್ದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಕರ್ತವ್ಯಕ್ಕೆ ಟ್ವಿಟರ್​ನಲ್ಲಿ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ನನಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ವೇಳೆ ಮುಂಗಡ ಹಣ ಪಾವತಿಸಲು ತುಂಬಾ ಕಷ್ಟವಾಯಿತು. ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅದನ್ನು ವಾಪಸ್ ನೀಡಿದ್ದಾರೆ. ಆಧಿಕಾರಿಗಳ ಕ್ರಮದಿಂದ ಅನುಕೂಲವಾಗಿದೆ. | ಸೋಂಕಿತ ವ್ಯಕ್ತಿ ನನ್ನ ತಾಯಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವಾಗ 2 ಲಕ್ಷ ರೂ. ಕಟ್ಟಿಸಿಕೊಂಡಿದ್ದರು. ಒಟ್ಟಾರೆ ಚಿಕಿತ್ಸೆಗೆ -ಠಿ;2.18 ಲಕ್ಷ ವೆಚ್ಚವಾಗಿದೆ. ಈಗ ಮುಂಗಡವಾಗಿ ಪಡೆದಿದ್ದ ಹಣ ವಾಪಸ್ ನೀಡಿದ್ದಾರೆ. | ಮೊಹಮ್ಮದ್ ಸೋಂಕಿತ ಮಹಿಳೆಯ ಪುತ್ರ ಪ್ರತಿ ಹಂತದಲ್ಲೂ ಆಸ್ಪತ್ರೆಗಳ ಮೇಲೆ ನಿಗಾವಹಿಸಲಾಗಿದೆ. ಸರ್ಕಾರದ ನಿಯಮ ಉಲ್ಲಂಘಿಸಿ, ಸೋಂಕಿತರಿಂದ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. | ರೂಪಾ ಡಿ. ಮೌದ್ಗಿಲ್ ಐಜಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net