

| ದೇವರಾಜ್ ಕನಕಪುರ ಬೆಂಗಳೂರು
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಅಕ್ರಮವಾಗಿ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಂಡಿರುವ ಬಗ್ಗೆ ಸರ್ಕಾರ ಸಮಿತಿ ರಚನೆ ಮಾಡಿ ಮೂರೂವರೆ ವರ್ಷ ಕಳೆದರೂ ಕೂಡ ಇದುವರೆಗೆ ಒಂದೇ ಒಂದು ಸಭೆ ನಡೆದಿಲ್ಲ! ಸರ್ಕಾರವೇ ಅಕ್ರಮಕ್ಕೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶದನ ವೇಳೆ ವಿಧಾನ ಪರಿಷತ್ತಿನ ಇಬ್ಬರು ಸದಸ್ಯರು ಈ ಕುರಿತು ಉನ್ನತ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದ್ದು, ಒಂದು ಕಡೆ ಅಕ್ರಮ ನಡೆದಿರುವ ಬಗ್ಗೆ ತನಿಖೆಗಾಗಿ ಸಮಿತಿ ರಚನೆ ಮಾಡಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಮತ್ತೊಬ್ಬರು ಕೇಳಿರುವ ಪ್ರಶ್ನೆಯಲ್ಲಿ ಆ ರೀತಿಯ ಯಾವುದೇ ಕ್ರಮ ನಡೆದಿಲ್ಲವೆಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಈ ದ್ವಂದ್ವ ಹೇಳಿಕೆ ನೀಡಿರುವುದು ನೋಡಿದರೆ, ಉನ್ನತ ಶಿಕ್ಷಣ ಇಲಾಖೆಯೇ ಈ ಅಕ್ರಮವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಅಕ್ರಮವೇನು?: ರಾಜ್ಯದಲ್ಲಿ 20 ಖಾಸಗಿ ಕಾಲೇಜುಗಳಿವೆ. ಈ ಕಾಲೇಜುಗಳ ಪೈಕಿ 9 ಇಂಜಿನಿಯರಿಂಗ್ ಕಾಲೇಜುಗಳು 2018ರಲ್ಲಿ ಸರ್ಕಾರ ನಿಗದಿ ಪಡಿಸಿರುವ ಇನ್ಟೇಕ್ಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿತ್ತು. ಖಾಸಗಿ ಕಾಲೇಜುಗಳಲ್ಲಿ ಸರ್ಕಾರದ ಕೋಟವಾಗಿ ಶೇ.40 ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಿಡಬೇಕೆಂಬ ನಿಯಮ ವಿಧಿಸಿದೆ. ಆದರೆ, ಪ್ರತಿ ಕಾಲೇಜಿನಲ್ಲಿ ಇದಕ್ಕಿಂತ ಅಂದರೆ, 600ರಿಂದ 800 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದು, ಸರ್ಕಾರದ ಗಮನಕ್ಕೆ ಬಂದಿತ್ತು. ಈ ರೀತಿ ಪ್ರವೇಶ ಕಲ್ಪಿಸಿರುವುದು ಸರ್ಕಾರದ ನಿಯಮಕ್ಕೆ ವಿರೋಧವಾಗಿದ್ದು, ಇದರ ತನಿಖೆ ನಡೆಸಲು ಉನ್ನತ ಶಿಕ್ಷಣ ಇಲಾಖೆ 2018 ಮಾರ್ಚ್ನಲ್ಲಿ ಒಂದು ಉನ್ನತ ಅಧಿಕಾರದ ಸಮಿತಿ ರಚಿಸಿತ್ತು. ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು ಇದರ ಅಧ್ಯಕ್ಷರಾಗಿದ್ದರು. ಇದು ಆರು ಅಧಿಕಾರಿಗಳ ಸಮಿತಿಯಾಗಿತ್ತು. ಸಮಿತಿ ರಚನೆಯಾಗಿ ಮೂರುವರೆ ವರ್ಷ ಕಳೆದರೂ ಈವರೆಗೆ ಕನಿಷ್ಠ ಒಂದು ಸಭೆಯನ್ನೂ ಮಾಡಿಲ್ಲ. ಆ ಸಮಯದಲ್ಲಿ ಸಾರ್ವಜನಿಕರ ಕಣ್ಣೊರೆಸುವುದಕ್ಕಾಗಿ ಸಮಿತಿ ರಚನೆ ಮಾಡಿತ್ತೇ ಎಂಬ ಪ್ರಶ್ನೆ ಉದ್ಧವಿಸಿದೆ.
ದ್ವಂದ್ವ ಉತ್ತರ: ವಿಧಾನ ಪರಿಷತ್ತಿನ ಸದಸ್ಯೆ ಡಾ.ತೇಜಸ್ವಿನಿ ಗೌಡ ಅವರು ಈ ಖಾಸಗಿ ಕಾಲೇಜು ಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶ ಪಡೆದಿರುವ ಕುರಿತು ಉನ್ನತ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದ್ದರು. ಈ ವೇಳೆ ಸರ್ಕಾರ ನಿಗದಿ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚುವರಿ ಪ್ರವೇಶ ಮಾಡಿಕೊಂಡಿರುವುದನ್ನು ಪರಿಶೀಲಿಸಲು ಸರ್ಕಾರ ಸಮಿತಿ ರಚಿಸಿದೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಉತ್ತರ ನೀಡಿದ್ದಾರೆ. ಇದೇ ಪ್ರಶ್ನೆಯನ್ನು ಪರಿಷತ್ತಿನ ಮತ್ತೊಬ್ಬ ಸದಸ್ಯ ಎನ್.ಅಪ್ಪಾಜಿಗೌಡ ಕೇಳಿದ್ದು, ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳಲಾಗಿದೆಯೇ? ಎಂಬ ಪ್ರಶ್ನೆಗೆ ಇದೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ‘ಇಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಇಲಾಖೆಯೇ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಕ್ರಮದ ತನಿಖೆಗಾಗಿ ಸಮಿತಿ ರಚನೆ ಮಾಡಿದ್ದು, ನಿಜ. ಆದರೆ, ಆ ಸಮಿತಿ ಕೇವಲ ಕಾಗದದಲ್ಲಿ ಮಾತ್ರ ಉಳಿದಿತ್ತು. ಒಂದೆ ಒಂದು ಸಭೆ ಕೂಡ ಕರೆದಿಲ್ಲ.
|ಡಾ.ವಿ.ಸುದೇಶ್ ಸಮಿತಿ ಸದಸ್ಯರಾಗಿದ್ದವರು
ಲಕ್ಷಾಂತರ ಹಣ!: ಖಾಸಗಿ ಕಾಲೇಜುಗಳಲ್ಲಿ ಈ ರೀತಿ ಇನ್ಟೇಕ್ಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಪ್ರವೇಶ ಪಡೆದುಕೊಳ್ಳುವ ವೇಳೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೇ ಹಣ ಪಡೆದಿವೆ. ಈ ಬಗ್ಗೆ ತನಿಖೆ ನಡೆಸಿ ಕಾಲೇಜುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗಿದ್ದ ಶಿಕ್ಷಣ ಇಲಾಖೆಯೇ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆ ಮೂಲಕ ಸರ್ಕಾರಕ್ಕೆ ಖಾಸಗಿ ಕಾಲೇಜುಗಳ ಮೇಲೆ ನಿಯಂತ್ರಣ ಇಲ್ಲ ಎಂಬುದು ಸಾಬೀತುಗೊಳ್ಳುತ್ತಿರುವುದು ತಿಳಿಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.