ಪಾರ್ಕಿಂಗ್, ಸ್ವಚ್ಛತೆ ಆದ್ಯತೆ ನೀಡಿ

budget (1)
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್ ಇತರರಿದ್ದರು.
Published on

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ಅಭಿವೃದ್ದಿ ಸಲುವಾಗಿ ಪಟ್ಟಣದ ಪ್ರಮುಖರು ಮತ್ತು ಸಾರ್ವಜನಿಕರ ಸಲಹೆಯನ್ನು ಪರಿಗಣಿಸಿ ಮುಂದಿನ ಆರ್ಥಿಕ ವರ್ಷದ ಮುಂಗಡ ಪತ್ರ ಸಿದ್ಧಪಡಿಸಲಾಗುವುದು ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಹೇಳಿದರು.

ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಪಂಗೆ ಸ್ಥಳೀಯವಾಗಿ ವಾರ್ಷಿಕ ಸುಮಾರು 7 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಉಳಿದಂತೆ ಎಸ್‌ಎ್ಸಿ, 15ನೇ ಹಣಕಾಸು, ಸರ್ಕಾರದ ವಿಶೇಷ ಅನುದಾನ, ಕೇಂದ್ರ ಮತುತ ರಾಜ್ಯ ಸರ್ಕಾರಗಳಿಂದ ಬರುವ ಆರ್ಥಿಕ ನೆರವು ಆಧರಿಸಿ ಆದ್ಯತೆ ಮೇಲೆ ಅಭಿವೃದ್ಧಿ ಕಾರ್ಯ ನಿರ್ವಹಿಸಲಾಗುವುದು. ಕಳೆದ ವರ್ಷ 40 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು ಎಂದು ತಿಳಿಸಿದರು.

ಪಟ್ಟಣದ ಸ್ವಚ್ಛತೆ, ವಾಹನ ನಿಲುಗಡೆ ಮತ್ತು ಸಂಚಾರ ನಿರ್ವಹಣೆ, ಬೀದಿ ನಾಯಿ ಮತ್ತು ಗೂಳಿಗಳ ನಿಯಂತ್ರಣ ಮುಂತಾದ ವಿಚಾರಗಳು ಸಾರ್ವಜನಿಕರಿಂದ ಮಂಡನೆಯಾಗಿವೆ. ಉಳಿದಂತೆ ಬೀದಿ ವ್ಯಾಪಾರಿಗಳಿಂದಾಗಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಆಗುತ್ತಿರುವ ಅಡಚಣೆ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು. ಈ ವಿಚಾರಗಳ ಬಗ್ಗೆ ಪದೇಪದೆ ಪಪಂ ಆಡಳಿತಕ್ಕೆ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿಯುತ್ತಿತ್ತ. ಈ ಬಾರಿಯಾದರೂ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿದ್ದವರು ಒತ್ತಾಯಿಸಿದರು.

ಪಟ್ಟಣದ ರಾಜಕಾಲುವೆ ಮೂಲಕ ಹಾಗೂ ಸಂಪೂರ್ಣ ತ್ಯಾಜ್ಯ ನೇರವಾಗಿ ತುಂಗಾ ನದಿ ಸೇರುತ್ತಿರುವ ಕಾರಣ ನದಿ ನೀರು ಮಲಿನವಾಗುತ್ತಿದೆ. ಮುಖ್ಯ ಬಸ್ ನಿಲ್ದಾಣ, ಆಗುಂಬೆ ರಸ್ತೆ ಮತ್ತು ಟಿಎಪಿಸಿಎಂಎಸ್ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಗೃಹಗಳಲ್ಲಿ ದುರ್ನಾತ ಉಂಟಾಗಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಹಿರಿಯ ನಾಗರಿಕ ಬೆಳ್ಳಯ್ಯ ಆಗ್ರಹಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಟಿ.ಎಲ್.ಸುರೇಶ್ ಮತ್ತು ಮಾಜಿ ಸದಸ್ಯ ಬಿ.ಎನ್.ಕೃಷ್ಣಮೂರ್ತಿ ಭಟ್, ಎಳ್ಳಮಾವಾಸ್ಯೆ ಜಾತ್ರೆಯ ಪೂರ್ವಭಾವಿ ಸಿದ್ಧತೆ ಮತ್ತು ತುಂಗಾ ನದಿಯ ಚಕ್ರತೀರ್ಥದಿಂದ ರಾಮಮಂಟಪದವರೆಗೆ ಸಂಪರ್ಕ ರಸ್ತೆ ನಿರ್ಮಿಸಿದ ಪಪಂ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಸ್ತೆ ಅಗಲೀಕರಣದ ವೇಳೆ ಸ್ಥಳಾಂತರಿಸಲಾಗಿದ್ದ ಪಟ್ಟಣದ ಗಾಂಧಿ ಚೌಕದಲ್ಲಿದ್ದ ಅಶೋಕ ಸ್ತಂಭವನ್ನು ಪುನಃ ಅದೇ ಜಾಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಲಾಯಿತು.

ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್, ಪಪಂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net