ಗುಜರಾತ್​ನಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಷೋ; ಮೂರೂವರೆ ತಾಸಿನಲ್ಲಿ 50 ಕಿ.ಮೀ. ಪ್ರಯಾಣ ರಸ್ತೆಯ ಇಕ್ಕೆಲದಲ್ಲಿ ಜನಸ್ತೋಮ

Modi
Published on

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್​ನಲ್ಲಿ ಮೆಗಾ ರೋಡ್ ಷೋ ನಡೆಸಿದ್ದು, ಇದು ಭಾರತೀಯ ನಾಯಕರೊಬ್ಬರು ನಡೆಸಿದ ಇದುವರೆಗಿನ ಸುದೀರ್ಘ ರೋಡ್ ಷೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋಧ್ರಾ ಗಲಭೆ ಸಂಭವಿಸಿದ ಪ್ರದೇಶಗಳಲ್ಲಿ ಒಂದಾದ ನರೋಡ್ ಗ್ರಾಮದಿಂದ ಆರಂಭಿಸಿ ಸುಮಾರು 50 ಕಿ.ಮೀ ದೂರವನ್ನು ರೋಡ್ ಷೋ ಮೂಲಕ ಕ್ರಮಿಸಿದರು.

ಹೂಗಳಿಂದ ಅಲಂಕೃತಗೊಂಡಿದ್ದ ತೆರೆದ ಎಸ್​ಯುುವಿ ವಾಹನದಲ್ಲಿ ಪ್ರಧಾನಿ ಮೋದಿ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನಸಮೂಹಕ್ಕೆ ಕೈ ಬೀಸುತ್ತಾ ಸಾಗಿದರು. ಸಾವಿರಾರು ಜನರು ಪಕ್ಷದ ಧ್ವಜಗಳನ್ನು ಬೀಸುತ್ತಾ, ಡೋಲು ಬಾರಿಸುತ್ತ ಬಿಜೆಪಿಗೆ ಜೈಕಾರ ಕೂಗುತ್ತ ಸಂಭ್ರಮದಿಂದ ಪಾಲ್ಗೊಂಡಿದ್ದರು. ರೋಡ್ ಶೋ ಸುಮಾರು 3.5ಗಂಟೆ ಅವಧಿಯಲ್ಲಿ ಥಕ್ಕರ್​ಬಾಪನಗರ, ಬಾಪುನಗರ, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬಾ, ಜಮಾಲ್​ಪುರ ಖಾಡಿಯಾ ಸೇರಿದಂತೆ 16 ಕ್ಷೇತ್ರಗಳನ್ನು ಹಾದು ಗಾಂಧಿನಗರದಲ್ಲಿ ಕೊನೆಗೊಂಡಿತು.

ರಾಮಭಕ್ತರ ನಾಡಿನಲ್ಲಿ ರಾವಣ ಹೇಳಿಕೆ ಸರಿಯಲ್ಲ: ರಾಮಭಕ್ತರ ನಾಡಿನಲ್ಲಿ ಯಾರನ್ನೇ ಆಗಲಿ ರಾವಣ ಎಂದು ಕರೆಯುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗುಡುಗಿದ್ದಾರೆ. ಗುಜರಾತ್​ನ ಪಂಚಮಹಲ್​ನ ಕಲೋಲ್​ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮೋದಿಯನ್ನು ಯಾರು ಹೆಚ್ಚು ಅವಮಾನಿಸುತ್ತಾರೆ, ಹೆಚ್ಚು ಕೀಳು ಪದಗಳಿಂದ ನಿಂದಿಸುತ್ತಾರೆ ಎಂಬ ಪೈಪೋಟಿ ಕಾಂಗ್ರೆಸ್​ನಲ್ಲಿ ನಡೆಯುತ್ತಿದೆ. ‘ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಮೋದಿ ನಾಯಿಯಂತೆ ಸಾಯುತ್ತಾರೆ ಎಂದು ಹೇಳಿದ್ದರು. ಇನ್ನೊಬ್ಬರು ಮೋದಿ ಹಿಟ್ಲರ್ ರೀತಿ ಸಾಯುತ್ತಾರೆ ಎಂದಿದ್ದರು. ಮತ್ತೊಬ್ಬರು ನನಗೆ ಅವಕಾಶ ಸಿಕ್ಕರೆ ಮೋದಿಯನ್ನು ನಾನೇ ಕೊಲ್ಲುತ್ತೇನೆ ಎಂದು ಹೇಳಿದ್ದಾರೆ. ಕೆಲವರು ರಾವಣ, ರಾಕ್ಷಸ ಎಂದೆಲ್ಲ ಕರೆದಿದ್ದಾರೆ. ಇಷ್ಟಾಗಿಯೂ ಕಾಂಗ್ರೆಸ್​ಗೆ ಪಶ್ಚಾತ್ತಾಪ ಇಲ್ಲ ಎಂದು ಕಿಡಿಕಾರಿದರು.

ಕೆಸರು ಎರಚಿದಷ್ಟು ಕಮಲ ಅರಳುತ್ತದೆ

ಕಾಂಗ್ರೆಸ್ ನಾಯಕರು ಕೆಸರು ಎರಚಿದಷ್ಟು ಕಮಲ ಅರಳುತ್ತದೆ. ನಾನು ಗುಜರಾತ್​ನ ಮಗ. ಗುಜರಾತ್ ನನಗೆ ನೀಡಿದ ಶಕ್ತಿ ಕಾಂಗ್ರೆಸ್ಸಿಗರನ್ನು ಗೊಂದಲಕ್ಕೀಡು ಮಾಡುತ್ತಿದೆ. ದಶಕಗಳಿಂದ ಹಳೆಯ ಪಕ್ಷ ಗರೀಬಿ ಹಟಾವೋ ಎಂಬ ಒಂದೇ ಮಾತನ್ನು ಹೇಳುತ್ತಿದೆ. ಅವರು ಮಾಡಿದ ಏಕೈಕ ಕೆಲಸವೆಂದರೆ ಘೋಷಣೆ ಕೂಗುವುದು ಎಂದು ಪ್ರಧಾನಿ ಆರೋಪಿಸಿದರು.

ಖರ್ಗೆ ಮೇಲೆ ಗೌರವವಿದೆ

ವೈಯಕ್ತಿಕವಾಗಿ ಖರ್ಗೆ ಅವರ ಮೇಲೆ ಅಪಾರ ಗೌರವವಿದೆ. ನನಗೆ ಗೊತ್ತಿರುವಂತೆ ಖರ್ಗೆ ಈ ರೀತಿ ಮಾತನಾಡಲಾರರು. ಆದರೆ ನನ್ನ ವಿರುದ್ಧ ಮಾತನಾಡುವಂತೆ ಕಾಂಗ್ರೆಸ್ ಖರ್ಗೆ ಅವರನ್ನು ಬಲವಂತಪಡಿಸಿರಬಹುದು ಎಂದು ಹೇಳಿದರು. ಈ ಚುನಾವಣೆಯಲ್ಲಿ ಕಮಲಕ್ಕೆ ಮತ ಹಾಕುವ ಮೂಲಕ ತಮ್ಮನ್ನು ನಿಂದಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಜನರಿಗೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net