

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕೆಲವು ಹಿರಿಯ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರಿಗೆ ಗುರುವಾರ ತಾವೇ ಸ್ವತಃ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಈ ತಿಂಗಳ ಅಂತ್ಯಕ್ಕೆ 80ನೇ ವರ್ಷಕ್ಕೆ ಪದಾರ್ಪಣೆ ಮಾಡಲಿರುವ ವಿಧಾನ ಪರಿಷತ್ ಮಾಜಿ ಸಭಾಪತಿ, ಬಿಜೆಪಿ ನಾಯಕ ಡಿ.ಎಚ್. ಶಂಕರಮೂರ್ತಿ ಅವರಿಗೆ ಮೋದಿ ಬೆಳಗ್ಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದರು. ಪ್ರಧಾನಿ ಅವರ ಕರೆ ಬಂದಿದ್ದಕ್ಕೆ ಶಂಕರಮೂರ್ತಿ ಕೂಡ ಅಚ್ಚರಿಗೆ ಒಳಗಾದರು.
‘‘8.50ರ ಸುಮಾರಿಗೆ ಪ್ರಧಾನಿ ಕಚೇರಿ ಸಿಬ್ಬಂದಿಯೊಬ್ಬರು ನನಗೆ ಫೋನ್ ಮಾಡಿ, ಪ್ರಧಾನಿ ನಿಮ್ಮೊಂದಿಗೆ ಮಾತನಾಡಬೇಕೆಂದಿದ್ದಾರೆ. ನಿಮ್ಮಲ್ಲಿ ಸಮಯವಿದೆಯೇ ಎಂದು ವಿಚಾರಿಸಿದರು. ಅದಾದ ಎರಡೇ ನಿಮಿಷದಲ್ಲೇ ಪ್ರಧಾನಿ ಮೋದಿ ಕರೆ ಮಾಡಿದರು’’ ಎಂದು ಡಿಎಚ್‌ಎಸ್ ಶಿವಮೊಗ್ಗದಲ್ಲಿ ಪತ್ರಕರ್ತರಿಗೆ ತಿಳಿಸಿದರು.
‘‘ನಿಮ್ಮ ಹಿರಿತನ ಮತ್ತು ಅನುಭವ ಪಕ್ಷಕ್ಕೆ ಹಾಗೂ ರಾಷ್ಟ್ರಕ್ಕೆ ಅಗತ್ಯವಾಗಿದೆ. ಆರೋಗ್ಯ ಹೇಗಿದೆ?’’ ಎಂದು ಪ್ರಧಾನಿ ಪ್ರಶ್ನಿಸಿದರು. ‘‘ನಾನು ಚೆನ್ನಾಗಿದ್ದೇನೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಕರೊನಾ ವಿಷಯದಲ್ಲಿ ನಾವು ಹಸಿರು ವಲಯದಲ್ಲಿ ಇದ್ದೇವೆ’’ ಎಂದು ಪ್ರಧಾನಿಗೆ ಹೇಳಿದೆ. ‘‘ನೀವಿದ್ದ ಮೇಲೆ ಅದು ಹಸಿರು ವಲಯವೇ ಆಗಿರಬೇಕು’’ ಎಂದು ಪ್ರಧಾನಿ ಹಾಸ್ಯ ಚಟಾಕಿ ಹಾರಿಸಿದರು ಎಂದು ಡಿಎಚ್‌ಎಸ್ ತಿಳಿಸಿದರು.
‘‘ನಮ್ಮಿಬ್ಬರ ಮಾತುಕತೆ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಷಯ ಚರ್ಚೆಯಾಗಲಿಲ್ಲ, ಕರೊನಾದಂತಹ ಸಂಕಷ್ಟದ ಸಮಯದಲ್ಲೂ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದರಿಂದ ಪುಳಕಿತನಾಗಿದ್ದೇನೆ’’ ಎಂದು ಡಿಎಚ್‌ಎಸ್ ಹೇಳಿದರು.
ಇನ್ನೊಂದೆಡೆ, ಪುತ್ತೂರಿನಲ್ಲಿರುವ ಜನಸಂಘದ ಹಿರಿಯ ಮುಖಂಡ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರಿಗೂ ಬುಧವಾರ ಪ್ರಧಾನಿ ದೂರವಾಣಿ ಕರೆ ಮಾಡಿದ್ದರು.
‘‘ಹಿರಿಯ ಮುಖಂಡರಾದ ರಾಮ್ ಭಟ್ ಅವರೇ, ನಿಮಗೆ ಜನಸೇವಕ ನರೇಂದ್ರ ಮೋದಿ ಮಾಡುವ ನಮಸ್ಕಾರಗಳು. ನಿಮ್ಮಂಥ ಅಸಂಖ್ಯಾತ ಹಿರಿಯರು, ಸಾಧು, ಸಂತರ ಆಶೀರ್ವಾದದಿಂದ ನಾನು ಹಾಗೂ ಭಾರತ ಕ್ಷೇಮವಾಗಿದೆ. ಈ ಮಧ್ಯೆ ಕರೊನಾ ವೈರಸ್‌ನಿಂದ ಇಡೀ ವಿಶ್ವ ಭಯಗೊಂಡಿದ್ದು, ದೇಶವನ್ನು ಸಮರ್ಥವಾಗಿ ಮುನ್ನಡೆಸಿ, ಕರೊನಾ ವಿರುದ್ಧ ಸಮರ ಸಾರಲಾಗಿದೆ. ಇದಕ್ಕಾಗಿ ನಿಮ್ಮಂಥ ಹಿರಿಯರ ಆಶೀರ್ವಾದ ಅಗತ್ಯ’’ ಎಂದು ಪ್ರಧಾನಿ ನಿವೇದಿಸಿಕೊಂಡದ್ದಾಗಿ ರಾಮಭಟ್ ತಿಳಿಸಿದ್ದಾರೆ.
ಮತ್ತೊಂದೆಡೆ, ಕಾಸರಗೋಡು ಜಿಲ್ಲೆಯ ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತ, 93ರ ಹರೆಯದ ಬಿಜೆಪಿ ಮುಖಂಡ ತಡೆಗಲ್ಲು ರಾಮಕೃಷ್ಣ ಭಟ್ (ಟಿ.ಆರ್.ಕೆ ಭಟ್ ಪೆರ್ಲ) ಅವರಿಗೂ ಪ್ರಧಾನಿ ಗುರುವಾರ ಕರೆ ಮಾಡಿ ಮಾತನಾಡಿದ್ದಾರೆ.
ಐದು ನಿಮಿಷ ಇವರಿಬ್ಬರ ಮಧ್ಯೆ ಸಂಭಾಷಣೆ ನಡೆದಿದ್ದು, ಭಟ್ ಅವರ ಆರೋಗ್ಯ, ವ್ಯವಹಾರಗಳ ಬಗ್ಗೆ ಪ್ರಧಾನಿ ವಿಚಾರಿಸಿದರು. ನಿಮ್ಮಂಥ ಹಿರಿಯರು ಮಾಡಿದ ನಿಸ್ವಾರ್ಥ ಸೇವೆ, ದೇಶದಲ್ಲಿ ಇಂದು ಪ್ರಜ್ವಲಿಸುವಂತಾಗಿದೆ. ನಿಮ್ಮ ಕೆಲಸಗಳ ಬಗ್ಗೆ ಕೇಳಿ ತಿಳಿದುಕೊಳ್ಳುವ ಭಾಗ್ಯ ನನ್ನದಾಗಿರುವುದಕ್ಕೆ ಸಂತೋಷವಿದೆ. ಮುಂದೆಯೂ ದೇಶಸೇವೆ ಮಾಡುವ ಆಯುಷ್ಯ, ಆರೋಗ್ಯ ದೇವರು ಕರುಣಿಸಲಿ ಎಂದು ಹಾರೈಸಿದ್ದಾರೆ.