ಕೋವಿಡ್​ 19 ಬಿಕ್ಕಟ್ಟನ್ನು ಮೋದಿ ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದು; ದೇಶದ ಶೇ.93 ಜನರ ನಂಬಿಕೆ

PM Modi Pic 14 APR 20
Published on

ನವದೆಹಲಿ: ವಿಶ್ವವನ್ನೇ ಕಾಡುತ್ತಿರುವ ಕರೊನಾ ಮಾರಿಯಿಂದಾಗಿ ಭಾರತದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದು ಎಂದು ದೇಶದ ಶೇ.93.5 ಜನರು ನಂಬಿಕೆ ವ್ಯಕ್ತಪಡಿಸಿದ್ದಾರೆ.

ಮಾರ್ನಿಂಗ್​ ಕನ್ಸಲ್ಟ್​ ಎಂಬ ಸಂಸ್ಥೆ ಬುಧವಾರವಷ್ಟೇ ಜಾಗತಿಕವಾಗಿ ನಡೆಸಿದ್ದ ಸಮೀಕ್ಷೆಯಲ್ಲಿ ಕರೋನಾ ಪಿಡುಗು ನಿಯಂತ್ರಣದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿ ಇರುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಐಎಎನ್​ಎಸ್​-ಸಿ-ವೋಟರ್​ ಭಾರತದ ಮಟ್ಟದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಬಗ್ಗೆ ಹೆಚ್ಚಿನ ನಂಬಿಕೆ ವ್ಯಕ್ತವಾಗಿರುವುದು ಗಮನಾರ್ಹ.

ಮಾ.25ರಂದು ಕೇಂದ್ರ ಸರ್ಕಾರ ಏಪ್ರಿಲ್​ 14ರವರೆಗೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿತ್ತು. ಬಳಿಕ ಲಾಕ್​ಡೌನ್​ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿತ್ತು.

ಲಾಕ್​ಡೌನ್​ನ ಮೊದಲ ಅವಧಿಯಲ್ಲಿ ನಡೆಸಿತ್ತು ಸಮೀಕ್ಷೆಯಲ್ಲಿ ರಾಷ್ಟ್ರದಲ್ಲಿನ ಕರೊನಾ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ನರೇಂದ್ರ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ಬಗ್ಗೆ ಶೇ.76.8 ಜನರು ನಂಬಿಕೆ ಹೊಂದಿದ್ದರು. ಇದೀಗ ಗುರುವಾರ ಬಿಡುಗಡೆಯಾಗಿರುವ ಸಮೀಕ್ಷಾ ವರದಿಯಲ್ಲಿ ಏಪ್ರಿಲ್​ 21ರ ವೇಳೆಗೆ ಈ ಪ್ರಮಾಣ ಶೇ.93.5ಕ್ಕೆ ಹೆಚ್ಚಳವಾಗಿದೆ.

ಕರೊನಾ ವೈರಸ್​ ಪಿಡುಗಿನ ನಿವಾರಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದು ನನ್ನ ಭಾವನೆ ಎಂಬ ಒಂದು ವಾಕ್ಯದ ಹೇಳಿಕೆಯನ್ನು ನೀಡಿ, ಮಾ.16ರಿಂದ ಏ.21ರವರೆಗೆ ಸಮೀಕ್ಷೆ ನಡೆಸಲಾಗಿತ್ತು.

ಏಪ್ರಿಲ್​ 16ರಂದು ದೇಶದ ಶೇ.75.8 ಜನರು ಕೋವಿಡ್​ 19 ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಬಲ್ಲದು ಎಂದು ಹೇಳಿದ್ದರು. ಆದರೆ, ದೇಶಾದ್ಯಂತ ಕಟ್ಟುನಿಟ್ಟಾಗಿ ಲಾಕ್​ಡೌನ್​ ಅನ್ನು ಅನುಷ್ಠಾನಗೊಳಿಸುತ್ತಿರುವಂತೆ ಕೇವಲ ಐದು ದಿನಗಳಲ್ಲಿ ಈ ಪ್ರಮಾಣ ಶೇ.93.5ಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net