

ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣವಾಗಲಿರುವ ಸುಮಾರು 8 ಸಾವಿರ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.
‘‘ಕೇಸರಿ ಕೂಡ ಒಂದು ಬಣ್ಣ ಹೌದೋ ಅಲ್ಲವೋ? ಆರ್ಕಿಟೆಕ್ಟ್‌ಗಳು ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಾಕಿ ಚೆನ್ನಾಗಿರುತ್ತೆ ಅಂತ ಹೇಳಿದರೆ ನಾನು ಹಾಕಿಯೇ ಹಾಕುತ್ತೇನೆ. ಅದನ್ನು ಆರ್ಕಿಟೆಕ್ಟ್ ನಿರ್ಧರಿಸುತ್ತಾರೆಯೇ ಹೊರತು, ಬಣ್ಣ ಹೇಗಿರಬೇಕು, ಕಿಟಕಿ ಹೇಗಿರಬೇಕು, ಮೆಟ್ಟಿಲು ಹೇಗಿರಬೇಕು ಎಂಬುದರ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅದನ್ನೆಲ್ಲ ನೋಡಿಕೊಳ್ಳಲು ಆರ್ಕಿಟೆಕ್ಟ್‌ಗಳಿದ್ದಾರೆ, ಅವರು ಕೊಡುವ ವಿನ್ಯಾಸದ ಆಧಾರದ ಮೇಲೆ ನಾವು ತೀರ್ಮಾನ ಕೈಗೊಳ್ಳುತ್ತೇವೆ’’ ಎಂದು ಸುದ್ದಿಗಾರರಿಗೆ ಸಚಿವ ನಾಗೇಶ್ ಹೇಳಿದರು.
ಇದೇ ವಿಷಯ ಒಂದು ವಿವಾದವಾಗಬಹುದಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘‘ಒಂದಷ್ಟು ಜನರಿಗೆ (ಕಾಂಗ್ರೆಸ್) ಕೇಸರಿ ಬಣ್ಣದ ಬಗ್ಗೆಯೇ ಅಲರ್ಜಿ ಇದೆ. ಆದರೆ ಅವರ ಪಕ್ಷದ ಧ್ವಜದಲ್ಲೂ ಕೇಸರಿ ಇದೆ. ಮತ್ತೆ ಅದನ್ಯಾಕೆ ಇಟ್ಟುಕೊಂಡಿದ್ದಾರೆ? ತೆಗೆದುಹಾಕಿಬಿಡಲಿ. ಪೂರ್ತಿ ಹಸಿರು ಬಣ್ಣದ ಧ್ವಜ ಮಾಡಿಕೊಂಡು ಬಿಡಲಿ’’ ಎಂದು ಸವಾಲು ಹಾಕಿದರು.