ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿ

nandhi
ಎನ್.ಆರ್.ಪುರ ತಾಲೂಕು ಕರಗುಂದದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.
Published on

ಎನ್.ಆರ್.ಪುರ: ಸಮಾಜದಲ್ಲಿ ಹೆಚ್ಚೆಚ್ಚು ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದರೆ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಪುರೋಹಿತ ಪ್ರಕಾಶ್ ಭಟ್ ಹೇಳಿದರು.
ತಾಲೂಕಿನ ಕರಗುಂದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಾರ್ಷಿಕ ಪೂಜೆ ಹಾಗೂ ನಂದಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ದೇವರ ಸಾನ್ನಿಧ್ಯ ಅತ್ಯಂತ ಪವಿತ್ರವಾದುದು. ಮನುಷ್ಯನ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುವ ಏಕೈಕ ಕೇಂದ್ರ ದೇವರ ಸಾನ್ನಿಧ್ಯ. ನಿಷ್ಕಲ್ಮಷ ಮನಸ್ಸಿನಿಂದ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ ಎಂದರು.
ವಾರ್ಷಿಕ ಮಹಾ ಪೂಜೆ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ವಾಸ್ತು ರಾಕ್ಷೋಘ್ನ ಹೋಮ, ಅಧಿವಾಸ ಹೋಮ, ಕಳಸಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಸತ್ಯನಾರಾಯಣ ಪೂಜೆ, ಮಹಾ ಮಂಗಳಾರತಿ ಜರುಗಿತು.
ವಾರ್ಷಿಕ ಮಹಾಪೂಜೆ ಅಂಗವಾಗಿ ಶನಿವಾರ ದುರ್ಗಾಪರಮೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವ, ಕರಗುಂದ, ಮಂಜಿನಕೊಪ್ಪ, ಶೆಟ್ಟಿಕೊಪ್ಪ, ಅರಿಶಿನಗೆರೆ, ಭೀಮನರಿ, ಚನಮಣಿ, ಬಣಗಿ ಗ್ರಾಮಸ್ಥರಿಂದ ಪೂಜೆ ಪುನಸ್ಕಾರಗಳು ನಡೆದವು. ಭಾನುವಾರ ಕರಗುಂದ ಸಿದ್ದೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿತು.
ನಂದಿ ವಿಗ್ರಹ ದಾನಿಗಳಾದ ಕೆ.ಎಸ್.ದಿವಾಕರ್ ಗೌಡ ಹಾಗೂ ಕುಟುಂಬದವರನ್ನು ದೇವಸ್ಥಾನ ಸಮಿತಿ ಪರವಾಗಿ ಗೌರವಿಸಲಾಯಿತು. ಎನ್.ಆರ್.ಪುರದ ಪುರೋಹಿತ ಜಗದೀಶ್ ಭಟ್ ಮತ್ತು ಸಂಗಡಿಗರ ನೇತೃತ್ವದಲ್ಲಿ ವಿಶೇಷ ಪೂಜೆ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net