ಹೊಸ ವರ್ಷಕ್ಕೆ ಇಳಿಕೆ ಸಿಹಿ: ಸೂರಿನ ಹೊರೆ ಸಡಿಲ, ಕೈಗಾರಿಕೆಗೆ ಭೂಮಿ ಸರಳ, ಎಲ್​ಪಿಜಿ ಅಗ್ಗ, ಮನೆ ಖರೀದಿ ಸುಲಭ..

Front
ಹೊಸ ವರ್ಷದ ನಿಮಿತ್ತ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಟಿಟಿಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಚಿವ ಮುನಿರತ್ನ, ಟಿಟಿಡಿ ನಿರ್ದೇಶಕ ಶಶಿಧರ ಇದ್ದರು.
Published on
ಹೊಸ ವರ್ಷದ ಮೊದಲ ದಿನವೇ ಜನರ ಆರ್ಥಿಕ ಹೊರೆ ಇಳಿಸುವ ಮೂರು ಮಹತ್ವದ ಘೋಷಣೆ ಹೊರಬಿದ್ದಿವೆ. ನಿವೇಶನ, ಮನೆ ಖರೀದಿ ನೋಂದಣಿ ದರ ಕಡಿತಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಹಾಗೆಯೇ ಕೈಗಾರಿಕೆಗಳಿಗೆ ಜಮೀನು ನೀಡಿಕೆ ನಿಯಮ ಸರಳಗೊಂಡಿದೆ. ಮತ್ತೊಂದೆಡೆ ದೇಶಾದ್ಯಂತ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 102 ರೂ. ಕಡಿತಗೊಂಡಿದೆ.

ಬೆಂಗಳೂರು: ನೋಂದಣಿ ಸಂದರ್ಭದಲ್ಲಿ ಕಂದಾಯ ನಿವೇಶನ ಹಾಗೂ ಪ್ಲಾಟ್ ಮೇಲಿನ ಮಾರ್ಗಸೂಚಿ ದರದ ಮೇಲೆ ಶೇ.10 ಕಡಿತ ಮಾಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕಂದಾಯ ಸಚಿವ ಆರ್. ಅಶೋಕ್ ಶನಿವಾರ ಈ ಮಾಹಿತಿ ಹಂಚಿಕೊಂಡರು. ಹೊಸ ವರ್ಷದ ಮೊದಲ ದಿನದ ಕೊಡುಗೆಯಾಗಿ ಜನರಿಗೆ ಸರ್ಕಾರ ಈ ಪ್ರಕಟಣೆ ಮಾಡುತ್ತಿದೆ. ಕಳೆದ 2 ವರ್ಷದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಿವೇಶನ, ಮನೆ ಖರೀದಿ ವೇಳೆ ಮಾರ್ಗಸೂಚಿ ದರದ ಶೇ.10 ಕಡಿಮೆ ದರಕ್ಕೆ ನೋಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಮೂರು ತಿಂಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ ಎಂದರು.

ಮಾ.31ರವರೆಗೆ ರಿಯಾಯಿತಿ: ಆಯಾ ಪ್ರದೇಶದ ಮಾರ್ಗಸೂಚಿ ದರದ ಪ್ರಕಾರ ಶೇ.10 ಕಡಿಮೆಯಾಗಲಿದೆ, ಎಲ್ಲ ರೀತಿಯ ನಿವೇಶನ ನೋಂದಣಿಗೆ ಇದು ಅನ್ವಯವಾಗಲಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಮಾ.31ರವರೆಗೆ ಈ ರಿಯಾಯಿತಿ ಇರಲಿದೆ. ಮಾರ್ಗಸೂಚಿ ದರದ ಮೇಲಿನ ನೋಂದಣಿಗೆ ದರ ಹೆಚ್ಚಾಗುತ್ತದೆ ಎಂದು ಅನೇಕರು ನೋಂದಣಿ ಮಾಡಿಕೊಳ್ಳದ ಸಾಕಷ್ಟು ಪ್ರಕರಣಗಳಿವೆ. ಈ ರೀತಿ ರಿಯಾಯಿತಿ ನೀಡುವುದರಿಂದ ಸರ್ಕಾರಕ್ಕೆ ಶುಲ್ಕ ಕಡಿಮೆಯಾಗಬಹುದಾದರೂ ನೋಂದಣಿ ಸಂಖ್ಯೆ ಹೆಚ್ಚಾಗಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ತಿಳಿಸಿದರು.

ಎಷ್ಟು ಕಡಿಮೆ?: ಉದಾಹರಣೆಗೆ ಒಂದು ಲಕ್ಷ ರೂ. ಮಾರ್ಗಸೂಚಿ ದರಕ್ಕೆ ನಿಗದಿಯಾದ ನೋಂದಣಿ ಶುಲ್ಕವು ಈ ತೀರ್ವನದಿಂದ 90 ಸಾವಿರ ರೂ.ಗೆ ನಿಗದಿಯಾಗುತ್ತದೆ.

ಕೆಐಎಡಿಬಿ ಜಮೀನು ನಿಯಮ ಸಡಿಲ

ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಇನ್ನು ಮುಂದೆ 10 ವರ್ಷಗಳ ಅವಧಿಗೆ ಕೈಗಾರಿಕಾ ಉದ್ದೇಶಗಳಿಗೆ ಕೊಡಲಾಗುವ ಜಮೀನನ್ನು ಗುತ್ತಿಗೆ ಮತ್ತು ಮಾರಾಟದ ಕರಾರಿನ ಮೇಲೆ ನೀಡಲು ಸಮ್ಮತಿಸಲಾಗಿದೆ. ಉದ್ದೇಶಿತ ತಿದ್ದುಪಡಿಯಿಂದ ಉದ್ಯಮದಾರರು ಹಾಗೂ ಬಂಡವಾಳ ಹೂಡಿಕೆ ಮಾಡುವವರಿಗೆ ಅನುಕೂಲವಾಗಲಿದ್ದು, 1-2 ವಾರಗಳಲ್ಲಿ ಹೊಸ ನೀತಿ ನಿಯಮ ಪ್ರಕಟವಾಗಲಿದೆ. ಅಸ್ತಿತ್ವದಲ್ಲಿರುವ ನೀತಿಯಿಂದಾಗಿ ಅನೇಕ ಹೂಡಿಕೆ ದಾರರ ಹಿಂಜರಿಕೆ ಗಮನಿಸಿದ್ದು, ಭವಿಷ್ಯದಲ್ಲಿ ಎಲ್ಲ ಜಮೀನುಗಳನ್ನು ಖಾಸಗಿ ಕೈಗಾರಿಕೆಗಳು, ಸಂಸ್ಥೆಗಳಿಗೆ 10 ವರ್ಷಗಳ ಗುತ್ತಿಗೆ ಕಮ್ ಮಾರಾಟದ ಆಧಾರದ ಮೇಲೆ ಹಂಚಲಾಗುವುದು ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಸೆ. 2ರಂದು ವಿಜಯವಾಣಿಯಲ್ಲಿ ಪ್ರಕಟವಾದ ವರದಿ

2 ಎಕರೆಗಿಂತ ಹೆಚ್ಚಿನ ಭೂಮಿಯನ್ನು 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವುದರಿಂದ ಹಲವಾರು ಪ್ರಮುಖ ಖಾಸಗಿ ಕಂಪನಿಗಳು ಕೈಗಾರಿಕೆ ಸ್ಥಾಪಿಸಲು ಹಿಂಜರಿಯುತ್ತಿದ್ದವು. ಮಂಜೂರು ಮಾಡಿದ ಭೂಮಿಯನ್ನು ಮಾರಾಟ ಮಾಡಲು ಅವಕಾಶವಿರಲಿಲ್ಲ. ಅಲ್ಲದೆ, ಕೈಗಾರಿಕೆಗಳಿಗೆ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ, ಬಂಡವಾಳದ ಒಳಹರಿವು ಪಡೆಯಲು ಹಾಗೂ ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನಗೊಳಿಸಲು ತೊಂದರೆ ಎದುರಾಗಿತ್ತು. ಪ್ರಸ್ತಾವಿತ ತಿದ್ದುಪಡಿ ಮೂಲಕ ಯಾವುದೇ ಕೈಗಾರಿಕಾ ಘಟಕವು ಭೂ ಹಂಚಿಕೆ ನಂತರ ಎರಡು ವರ್ಷ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೆ, ಹತ್ತು ವರ್ಷಗಳವರೆಗೆ ಕಾಯದೆ ಕೆಐಎಡಿಬಿಯಿಂದ ಮಾರಾಟ ಪತ್ರದ ಶೀರ್ಷಿಕೆಯನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಇಲಾಖೆಯು ಉದ್ಯಮದ 24 ತಿಂಗಳ ಬ್ಯಾಲೆನ್ಸ್​ಶೀಟ್ ಪರಿಶೀಲಿಸಿ ಎಲ್ಲವೂ ನಿಯಮಬದ್ಧವಾಗಿದ್ದರೆ, ಸೇಲ್ ಡೀಡ್ ಕೊಡಲಾಗುತ್ತದೆ.

500 ಚದರಡಿ ವಾಸಸ್ಥಾನ ತೆರಿಗೆ ಮುಕ್ತ

ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ವ್ಯಾಪ್ತಿಯ 500 ಚದರಡಿವರೆಗಿನ ವಾಸಸ್ಥಳಕ್ಕೆ ಆಸ್ತಿ ತೆರಿಗೆ ಮನ್ನಾ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಶನಿವಾರ ನಡೆದ ನಗರಾಭಿವೃದ್ಧಿ ಇಲಾಖೆಯ ಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ನಿರ್ಧಾರ ಪ್ರಕಟಿಸಿದರು. ಫೆಬ್ರವರಿಯಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದ್ದು ಆಸ್ತಿ ತೆರಿಗೆ ಮನ್ನಾ ಘೋಷಣೆ ಹೊರ ಬಿದ್ದಿದೆ. ಈ ನಿರ್ಧಾರವನ್ನು ತಕ್ಷಣದಿಂದ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಠಾಕ್ರೆ ನಿರ್ದೇಶಿಸಿದ್ದಾರೆ. ಬಿಎಂಸಿ ವ್ಯಾಪ್ತಿಯ ಸುಮಾರು 16 ಲಕ್ಷ ಮನೆಗಳ ಮಾಲೀಕರಿಗೆ ಈ ಯೋಜನೆಯ ಲಾಭ ಸಿಗಲಿದೆ.

ವಾಣಿಜ್ಯ ಎಲ್​ಪಿಜಿ 102 ರೂಪಾಯಿ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಎಲ್ಪಿಜಿ ಗ್ರಾಹಕರು ಕೊಂಚ ನಿರಾಳವಾಗುವ ಸುದ್ದಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. 19 ಕೆ.ಜಿ. ತೂಕದ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆ 102.50 ರೂ. ಕಡಿತ ಮಾಡಲಾಗಿದ್ದು ಶನಿವಾರದಿಂದಲೇ (ಜ.1) ಅನ್ವಯವಾಗಿದೆ. ಬೆಲೆ ಇಳಿಕೆಯಿಂದಾಗಿ ದೆಹಲಿಯಲ್ಲಿ ಈ ಸಿಲಿಂಡರ್ ದರ 1998.50 ರೂ. ಆಗಲಿದೆ. ರೆಸ್ಟೋರೆಂಟ್, ಹೋಟೆಲ್ ಮತ್ತು ಟೀ ಸ್ಟಾಲ್​ಗಳಿಗೆ ಇದರಿಂದ ಪರಿಹಾರ ಸಿಗಲಿದೆ. ಅವುಗಳು 19 ಕೆಜಿ ಸಿಲಿಂಡರ್ ಬಳಸುವ ದೊಡ್ಡ ವಿಭಾಗವಾಗಿದೆ. ಡಿ.1ರಂದು 19 ಕೆಜಿ ಸಿಲಿಂಡರ್ ದರವನ್ನು 100 ರೂ. ಹೆಚ್ಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net