ವ್ಹೀಲಿಂಗ್ ಹಾವಳಿ ತಡೆಗಟ್ಟಿ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ

Bike Wheeling
ಸಾಂದರ್ಭಿಕ ಚಿತ್ರ
Published on

ಅತಿಯಾದ ವೇಗ, ತಪು್ಪ ದಿಕ್ಕಿನಲ್ಲಿ ಚಲನೆ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಯಿಂದ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಮತ್ತು ಪ್ರಾಣಹಾನಿಯ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಈ ನಡುವೆ, ಪೊಲೀಸರ ಆಶ್ವಾಸನೆ ಹೊರತಾಗಿಯೂ ರಾಜಧಾನಿ ಬೆಂಗಳೂರು ಸೇರಿ ಹಲವು ನಗರಗಳಲ್ಲಿ ವ್ಹೀಲಿಂಗ್ ಹಾವಳಿ ನಿಲ್ಲುತ್ತಿಲ್ಲ. ಮೊದಲು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದ ಈ ಹಾವಳಿ ಈಗ ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ತುಮಕೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಗೆ ವ್ಯಾಪಿಸಿಕೊಂಡಿದೆ. ಇದರಿಂದ ಬೈಕ್ ಸವಾರರು ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುವುದಷ್ಟೇ ಅಲ್ಲ, ಇತರರ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ. ರಸ್ತೆ ಸವಾರರಿಗಂತೂ ಈ ಸಮಸ್ಯೆ ದೊಡ್ಡ ಕಿರಿಕಿರಿಯಾಗಿ ಪರಿಣಮಿಸಿದೆ. ವ್ಹೀಲಿಂಗ್ ಪುಂಡರು ಹಾಡುಹಗಲಲ್ಲೇ ಸಂಚಾರ ಪೊಲೀಸರ, ಕಾನೂನಿನ ಭಯವಿಲ್ಲದೆ ನಡುರಸ್ತೆಯಲ್ಲಿ ಅಪಾಯಕಾರಿ ಕಸರತ್ತು ಮಾಡುತ್ತ ಹೋಗುವ ಪ್ರಕರಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯವೂ ನೋಡುವಂತಾಗಿದೆ. ಇದು ಅಶಿಸ್ತು ಮಾತ್ರವಲ್ಲ ಗಂಭೀರ ಅಪರಾಧವು ಹೌದು. ಅಪ್ರಾಪ್ತ ವಯಸ್ಸಿಗರು ಮತ್ತು 18ರಿಂದ 25 ವರ್ಷದೊಳಗಿನ ಯುವಕರು ಇಂಥ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗಿದ್ದಾರೆ. ಹದಿಹರೆಯದ ವಯಸ್ಸಿನ ತರುಣರ ಕೆಲ ಘಟನೆಗಳಲ್ಲಿ ಪಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರೂ, ಜನರು ಕೂಡ ಎಚ್ಚೆತ್ತುಕೊಂಡಿಲ್ಲ.

ಈಗ ಕರ್ನಾಟಕ ಹೈಕೋರ್ಟ್ ಕೂಡ ಖಾಕಿ ಕಾರ್ಯವೈಖರಿಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ಬೈಕ್ ಸವಾರರಿಂದ ವ್ಪ್ರೀಲಿಂಗ್ ನಡೆಯುತ್ತಿದ್ದು, ಇದನ್ನು ತಡೆಯಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸುವಂತೆ ಬುಧವಾರ ಸೂಚನೆ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 17ಕ್ಕೆ ನಿಗದಿಯಾಗಿದೆ. ನಗರಗಳ ಮುಖ್ಯ ರಸ್ತೆಗಳಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೂಡ ವ್ಹೀಲಿಂಗ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಕೆಲ ಪುಂಡರಂತೂ ಇದರ ವಿಡಿಯೋಗಳನ್ನು ರಾಜಾರೋಶವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪೊಲೀಸರು ಇಂಥ ವಿಡಿಯೋಗಳನ್ನು ಗಮನಿಸಿಯೇ ಕೆಲ ತಪ್ಪಿತಸ್ಥರನ್ನು ಬಂಧಿಸಿರುವುದೂ ಹೌದು. ಆದರೆ, ಈ ಸಮಸ್ಯೆಯ ತೀವ್ರತೆ ಹೆಚ್ಚುತ್ತಿರುವುದರಿಂದ ಆಯಾ ಠಾಣಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ಇದರಿಂದ ಆಗುತ್ತಿರುವ ಅಪಘಾತಗಳು ಮತ್ತು ಪ್ರಾಣಹಾನಿಯ ಬಗ್ಗೆ ತಿಳಿಸಿಕೊಡಬೇಕಿದೆ. ಹೈಕೋರ್ಟ್​ನ ಎಚ್ಚರಿಕೆ ಮತ್ತು ಅಸಮಾಧಾನ ಬಳಿಕವಾದರೂ ಸರ್ಕಾರ ಎಚ್ಚೆತ್ತುಕೊಂಡು ವ್ಹೀಲಿಂಗ್ ಹಾವಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸರು ತಪಾಸಣೆ, ದಂಡ ಮತ್ತು ಬಂಧನದಂಥ ಕ್ರಮಗಳನ್ನು ತೀವ್ರಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net