

ನವದೆಹಲಿ: ಜೂನ್ 23ರಿಂದ ಆರಂಭವಾಗಬೇಕಾಗಿದ್ದ ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆಯನ್ನು ಕರೊನಾ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಪ್ರಕಟಿಸಿದ ದೇವಸ್ಥಾನ ಆಡಳಿತ ಮಂಡಳಿ ನಂತರ ಕೆಲವೇ ನಿಮಿಷಗಳಲ್ಲೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ಒಟ್ಟು 42 ದಿನಗಳ ಈ ಜಗತ್ಪ್ರಸಿದ್ಧ ಯಾತ್ರೆ ಕಾಶ್ಮೀರದ ಎರಡು ಸ್ಥಳಗಳಿಂದ ಜೂನ್ 23ರಂದು ಏಕಕಾಲಕ್ಕೆ ಆರಂಭವಾಗುತ್ತದೆ. ‘‘ಲೆಫ್ಟಿನೆಂಟ್ ಗವರ್ನರ್ ಜಿ.ಸಿ. ಮುರ್ಮು ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಅಮರನಾಥ ದೇವಸ್ಥಾನ ಮಂಡಳಿಯ ಆಡಳಿತ ಸದಸ್ಯರ 38ನೇ ಸಭೆಯಲ್ಲಿ, ಕರೊನಾ ಹಾವಳಿಯ ಕಾರಣ ಯಾತ್ರೆಯನ್ನು ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಅದೇ ದಿನದಂದು ವಿಧಿವಿಧಾನಗಳ ಪ್ರಕಾರ ಪೂಜೆಯು ಸರಳವಾಗಿ ನಡೆಯಲಿದೆ’’ ಎಂದು ಬುಧವಾರ ಪ್ರಕಟಣೆ ಹೊರಡಿಸಲಾಗಿತ್ತು.
ಇದಾದ ಅರ್ಧ ಗಂಟೆಯಲ್ಲೇ ಇನ್ನೊಂದು ಅಧಿಕೃತ ಪ್ರಕಟಣೆ ಹೊರಬಿತ್ತು. ‘‘ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲು ಕೈಗೊಳ್ಳಲಾಗಿದ್ದ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ’’ ಎಂದಷ್ಟೇ ಆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್)