

ಜಗತ್ತಿನಾದ್ಯಂತ ಕರೊನಾ ವೈರಸ್ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆರ್ಥಿಕತೆಗೆ ತೀವ್ರ ಹೊಡೆತ ಕೊಟ್ಟಿದೆ. ದೊಡ್ಡದೊಡ್ಡ, ಬಲಿಷ್ಠ ರಾಷ್ಟ್ರಗಳೆಲ್ಲ ಕರೊನಾ ಎದುರು ತಲೆಬಾಗುವಂತಾಗಿದೆ.
ಕರೊನಾ ಪರಿಸ್ಥಿತಿ ನಿರ್ವಹಣೆಯನ್ನು ಆಯಾ ರಾಷ್ಟ್ರಗಳ ನಾಯಕರು ಸಮರ್ಥವಾಗಿ ನಿಭಾಯಿಸುತ್ತಿದ್ದರೂ ಕೂಡ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮುಂಚೂಣಿಯಲ್ಲಿದ್ದಾರೆ.
ಏಕಾಏಕಿ ಎದುರಾದ ಕರೊನಾ ಸಂಕಷ್ಟವನ್ನು ವಿಶ್ವದ ಹಲವು ದೇಶಗಳ ನಾಯಕರು ಹೇಗೆ ನಿಭಾಯಿಸುತ್ತಿದ್ದಾರೆ, ಎಷ್ಟು ಸಫಲರಾಗುತ್ತಿದ್ದಾರೆ ಎಂಬ ಬಗ್ಗೆ ಅಮೆರಿಕ ಮೂಲದ ಜಾಗತಿಕ, ಖಾಸಗಿ ತಂತ್ರಜ್ಞಾನ ಮತ್ತು ಮಾಧ್ಯಮ ಸಂಸ್ಥೆಯಾಗಿರುವ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ ನಡೆಸಿತ್ತು.
ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದ ಅಂಕಿಅಂಶದ ಪ್ರಕಾರ ಕರೊನಾ ಹೋರಾಟದಲ್ಲಿ ಪ್ರಥಮ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದ್ದಾರೆ. ಹಾಗೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 8 ನೇ ಸ್ಥಾನದಲ್ಲಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರಿಗೆ 68 ಅಂಕಗಳು ಬಂದಿವೆ. ಹಾಗೇ ಟ್ರಂಪ್ಗೆ 3 ಅಂಕಗಳು ಸಿಕ್ಕಿವೆ.
ಈ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಂಚಿಕೊಂಡಿದ್ದಾರೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರು ಕೊವಿಡ್-19 ನಿರ್ವಹಣೆಯಲ್ಲಿ ವಿಶ್ವ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಮ್ಮ ದೇಶದ ಜನರ ಸುರಕ್ಷತೆ, ರಕ್ಷಣೆಯೊಂದಿಗೆ ಬೇರೆ ದೇಶಗಳಿಗೂ ಸಹಾಯಹಸ್ತ ಚಾಚಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)