

ಮೂಡಿಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅಲುಗಾಡಿಸುವ ಶಕ್ತಿ ಪತ್ರಿಕೆಗಳಿಗಿದೆ. ದೈನಂದಿನ ಸುದ್ದಿಗಳನ್ನು ಆಧಾರವಾಗಿಟ್ಟುಕೊಂಡು ಶಾಸನ ಸಭೆ ಸದಸ್ಯರು ಸದನದಲ್ಲಿ ಚರ್ಚೆಗಿಳಿದರೆ ಸರ್ಕಾರ ಅಂತಹ ಚರ್ಚೆಗೆ ಮಾನ್ಯತೆ ನೀಡುತ್ತದೆ. ಇಲ್ಲವಾದರೆ ಸರ್ಕಾರವೆ ಬುಡಮೇಲಾಗುತ್ತದೆ ಎಂಬ ಭಯವು ಇದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಪಂ ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಡೆಯುವ ಪ್ರತಿಯೊಂದು ಚರ್ಚೆಯು ಅಂದಿನ ಪತ್ರಿಕೆಯ ಅವಲಂಬಿಸಿರುತ್ತದೆ. ಪತ್ರಿಕೆಗಳ ಸುದ್ದಿಗೆ ಮಾನ್ಯತೆಯಿಲ್ಲ ಎನ್ನುವುದು ಸರಿಯಲ್ಲ. ಅತಿವೃಷ್ಠಿಯಿಂದ ಮನೆ, ಜಾನುವಾರು ಕೊಟ್ಟಿಗೆ, ಸೇತುವೆ ಕುಸಿತ, ಕೊಚ್ಚಿ ಹೋದ ರಸ್ತೆಗಳು, ವಿದ್ಯುತ್ ವ್ಯತ್ಯಯ, ಮೊಬೈಲ್ ಗೋಪುರ ನಿಷ್ಕ್ರೀಯದಂತಹ ಸುದ್ದಿಗಳನ್ನು ಸದನದಲ್ಲಿ ಈ ಭಾರಿ ಚರ್ಚೆ ಮಾಡಲಾಗಿದೆ ಎಂದರು.
ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪತ್ರಕರ್ತರಾದ ಕಿರುಗುಂದ ಅಬ್ಬಾಸ್ ಅವರ ಪುತ್ರಿ ತಸ್ಮೀಯಾ, ಅಮರ್ ನಾಥ್ ಅವರ ಪುತ್ರಿ ಅನನ್ಯಾ, ಗೌಡಳ್ಳಿ ಪ್ರಸನ್ನ ಅವರ ಪುತ್ರಿ ಅನಿಕೇತನಾ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಮಂದಿಯನ್ನು ಸನ್ಮಾನಿಸಲಾಯಿತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಕಣಚೂರು, ತಾಪಂ ಇಒ ದಯಾವತಿ, ಪ್ರಸನ್ನ ಗೌಡಳ್ಳಿ, ಅಮರನಾಥ್, ಉಮಾಶಂಕರ್, ಉದಯ ಶಂಕರ್, ಪ್ರಸನ್ನ ಕುಮಾರ್, ಮಗ್ಗಲಮಕ್ಕಿ ಗಣೇಶ್ ಇತರರಿದ್ದರು.