

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಎಚ್-1ಬಿ ವೀಸಾ ವಿತರಣೆಯನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸಿ ಹೊರಡಿಸಿರುವ ಆದೇಶದಿಂದ ಕುಟುಂಬಗಳು ಪ್ರತ್ಯೇಕವಾಗುವ ಭೀತಿ ಎದುರಾಗಿದೆ. ಆದ್ದರಿಂದ ಈ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಅವರಿಗೆ ಸೂಚಿಸಬೇಕು ಎಂದು ಕೋರಿ 7 ಮಕ್ಕಳು ಸೇರಿ 174 ಭಾರತೀಯ ಮೂಲದ 174 ಮಂದಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ದಾಖಲಿಸಿಕೊಂಡಿರುವ ಅಮೆರಿಕದ ಕೊಲಂಬಿಯಾ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಕೇತಂಜಿ ಬ್ರೌನ್ ಜ್ಯಾಕ್ಸನ್, ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋ, ಆಂತರಿಕ ಭದ್ರೆತೆಯ ಪ್ರಭಾರ ಕಾರ್ಯದರ್ಶಿ ಚಾದ್ ಎಫ್ ವುಲ್ಫ್ ಹಾಗೂ ಕಾರ್ಮಿಕ ಕಾರ್ಯದರ್ಶಿ ಯೂಜೀನಿ ಸ್ಕಾಲಿಯಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಎಚ್-1ಬಿ/ಎಚ್-4 ವೀಸಾಗಳ ವಿತರಣೆಯನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸುವ ಸುಗ್ರೀವಾಜ್ಞೆಯಿಂದಾಗಿ ಅಮೆರಿಕದ ಆರ್ಥಿಕತೆಗೆ ಧಕ್ಕೆ ಉಂಟಾಗುತ್ತದೆ. ಜತೆಗೆ ಕುಟುಂಬಗಳನ್ನು ಬಲವಂತವಾಗಿ ಬೇರ್ಪಡುವಂತಾಗುತ್ತದೆ. ಸಂಸತ್ನ ಆಶಯಕ್ಕೆ ಇದು ವಿರುದ್ಧವಾಗಿದೆ ಎಂದು ಭಾರತೀಯರ ಪರ ವಕಾಲತ್ತು ವಹಿಸಿಕೊಂಡಿರುವ ವಕೀಲ ವಾಸ್ಡೆನ್ ಬನಿಯಾಸ್ ವಾದಿಸಿದ್ದಾರೆ.
ಅಧ್ಯಕ್ಷೀಯ ಸುಗ್ರೀವಾಜ್ಞೆ ಹೊರಡಿಸಿರುವ ಕ್ರಮ ನ್ಯಾಯಸಮ್ಮತವಲ್ಲ ಎಂದು ಘೋಷಿಸಬೇಕು. ಜತೆಗೆ ಬಾಕಿ ಉಳಿದಿರುವ ಎಚ್-1ಬಿ ಮತ್ತು ಎಚ್-4 ವೀಸಾ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಜೂ.22ರಂದು ಸುಗ್ರೀವಾಜ್ಞೆ ಹೊರಡಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ಉದ್ಯೋಗದ ವೀಸಾ ಕೊಡುವ ಪ್ರಕ್ರಿಯೆಯನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸಿದ್ದರು.