ಆರಂಭವಾಗದ ನೆರೆ ನಿರ್ವಹಣೆ ಸಿದ್ಧತೆ

bahdra
ಭರ್ತಿಯಾಗುವ ಹಂತ ತಲುಪಿರುವ ಭದ್ರಾ ಡ್ಯಾಂ.
Published on

ಭದ್ರಾವತಿ: ಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿರುವ ಕಾರಣ ಭದ್ರಾ ಜಲಾಶಯದ ನೀರಿನ ಮಟ್ಟ ದಿನೇದಿನೆ ಏರಿಕೆಯಾಗುತ್ತಿದ್ದು, ಭಾನುವಾರ 180.7 (ಗರಿಷ್ಠ 180)ಅಡಿ ತಲುಪಿದೆ. ಭರ್ತಿಯಾಗಲು ಐದು ಅಡಿ ಮಾತ್ರ ಬಾಕಿಯಿದೆ. ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಸುವ ಸಾಧ್ಯತೆ ಇರುವುದರಿಂದ ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ.

ಪ್ರತಿವರ್ಷ ಜಲಾಶಯದ ಮಟ್ಟ 176 ಅಡಿ ತಲುಪುತ್ತಿದ್ದಂತೆ ತಾಲೂಕು ಅಧಿಕಾರಿಗಳ ಸಭೆ ನಡೆಸಿ ನೆರೆ ಸಂತ್ರಸ್ತರ ಸ್ಥಳಾಂತರ, ನಿರಾಶ್ರಿತರಿಗೆ ಆಶ್ರಯ, ಆರೋಗ್ಯ ತಪಾಸಣೆ, ಊಟೋಪಚಾರ ವ್ಯವಸ್ಥೆ ಕುರಿತು ಚರ್ಚಿಸಲಾಗುತ್ತಿತ್ತು. ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿತ್ತು. ಜಾನುವಾರುಗಳನ್ನು ನದಿ ಸಮೀಪ ಬಿಡದಂತೆ ಸೂಚಿಸಲಾಗುತ್ತಿತ್ತು. ಕವಲಗುಂದಿ, ಹುತ್ತಾ ಕಾಲನಿ, ವಳ್ಳುವರ್ ಕಲ್ಯಾಣ ಮಂಟಪ ಸೇರಿ ಹಲವೆಡೆ ನಿರಾಶ್ರಿತರ ತಂಗುದಾಣಗಳನ್ನು ತೆರೆಯುವ ಆಲೋಚನೆ ಮಾಡುವ ಮೂಲಕ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಅಧಿಕಾರಿಗಳು ಈ ಯಾವುದೇ ಮುಂಜಾಗ್ರತೆ ವಹಿಸದಿರುವುದು ಆಶ್ಚರ್ಯಕ್ಕೆ ಎಡೆಮಾಡಿದೆ.
ಭತ್ತ ಬೆಳೆಗಾರರಿಗೆ ಅಭಯ: ಜೂನ್ ತಿಂಗಳಾದರೂ ಮಳೆ ಬಾರದಿದ್ದರಿಂದ ಜಲಾಶಯದಲ್ಲಿ ನೀರಿಲ್ಲದಿದ್ದರೆ ಈ ಬಾರಿ ಭತ್ತ ಬೆಳೆಯುವುದು ಹೇಗೆ ಎಂಬ ಆತಂಕದಲ್ಲಿ ಕೃಷಿಕರಿದ್ದರು. ಆದರೆ ಉತ್ತಮ ಮಳೆಯಿಂದಾಗಿ ಭತ್ತ ಬೆಳೆಗಾರರ ಸಂಕಷ್ಟ ದೂರವಾಗಿದೆ. ಮುಂದಿನ ಎರಡು ಬೆಳೆಗೆ ಯಾವುದೇ ಸಮಸ್ಯೆ ಇಲ್ಲ ಎಂಬ ನಂಬಿಕೆ ದೃಢವಾಗಿದ್ದು, ಎಲ್ಲೆಡೆ ಭತ್ತ ನಾಟಿ ಕಾರ್ಯ ಆರಂಭಿಸಿದ್ದಾರೆ. ನಾಲೆಯ ಆಸುಪಾಸಿನ ರೈತರು, ಕೆರೆ ಹಳ್ಳಗಳ ಆಶ್ರಯ ಇರುವ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಅಡಕೆ ಬೆಳೆಗಾರರು ಸಹ ನೀರಾವರಿ ಇಲಾಖೆಯ ಕಟ್ಟು ನೀರು ತಂತ್ರದಿಂದ ಹೊರಗುಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net