ಮಾರುಕಟ್ಟೆಯ ಹೊಸ ಟ್ರೆಂಡ್​ ಬಗ್ಗೆ ಪ್ರೇಮಾನಂದ ಮಹಾರಾಜ್​ ಎಚ್ಚರಿಕೆ! ಯುವಜನತೆಗೆ ಕಿವಿಮಾತು | Premanand Maharaj

ವಿಜಯವಾಣಿ (83)
Published on

Premanand Maharaj: ಇತ್ತೀಚಿನ ದಿನಗಳಲ್ಲಿ ವಿಧ ವಿಧವಾದ ಉಡುಗೆಗೆಳು ಮಾರುಕಟ್ಟೆಗಳಿಗೆ ಕಾಲಿಡುತ್ತಿವೆ. ಟ್ರೆಂಡ್​ ಲೋಕಕ್ಕೆ ಮೊದಲು ಹಾಗೂ ಹೆಚ್ಚಾಗಿ ಮಾರುಹೋಗುವುದೇ ಯುವಜನತೆ. ಬಹುತೇಕ ಹೊಸ ವಿಷಯಗಳು ಅಥವಾ ಟ್ರೆಂಡ್​ಗಳು ಒಪ್ಪುವಂತದ್ದೇ. ಆದರೆ, "ಓಂ" ಸೇರಿದಂತೆ ಹಿಂದೂ ಮಂತ್ರಗಳೊಂದಿಗೆ ಡಿಸೈನ್​ ಮಾಡಲಾದ ಉಡುಗೆಗಳನ್ನು ಧರಿಸುವುದು ನಿಜಕ್ಕೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದೇ ವಿಷಯವನ್ನು ಪ್ರಸ್ತಾಪಿಸಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್, ಈ ಬಗ್ಗೆ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ವೃಂದಾವನ ಸ್ಥಳದಿಂದ ಆಧ್ಯಾತ್ಮಿಕ ವಿಷಯಗಳನ್ನು ಬೋಧಿಸುವ ಪ್ರೇಮಾನಂದ ಮಹಾರಾಜ್ ಅವರು ಇತ್ತೀಚೆಗೆ ಈ ಹೊಸ ಪ್ರವೃತ್ತಿಯ ಕುರಿತು ಹಲವಾರು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು. "ಬಟ್ಟೆಗಳ ಮೇಲೆ ಅಂತಹ ಮಂತ್ರಗಳನ್ನು ಬಳಸುವುದು ಸರಿಯಲ್ಲ. ಈ ಪ್ರವೃತ್ತಿಯನ್ನು ಬೆಳೆಸಬಾರದು. ವೇದ ಮಂತ್ರಗಳನ್ನು ಭಕ್ತಿಯಿಂದ ಪಠಿಸಬೇಕೇ ವಿನಃ ಅವುಗಳನ್ನು ಬಟ್ಟೆಗಳ ಮೇಲೆ ಹಾಕಬಾರದು. ನಂಬಿಕೆ, ಪ್ರಾರ್ಥನೆ ಹೃದಯದಲ್ಲಿರಬೇಕು" ಎಂದು ಹೇಳಿದರು.

"ಪ್ರಸ್ತುತ, ಹಿಂದೂ ಧರ್ಮಗ್ರಂಥಗಳ ಶ್ಲೋಕಗಳನ್ನು ಹೊಂದಿರುವ ಬಟ್ಟೆಗಳು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿವೆ. ಬಟ್ಟೆಗಳ ಮೇಲೆ ಮಂತ್ರಗಳು ಡಿಸೈನ್​ ಫ್ಯಾಷನ್ ಟ್ರೆಂಡ್ ಆಗಿ ಮಾರ್ಪಟ್ಟಿವೆ. ಅನೇಕ ಬಟ್ಟೆ ಬ್ರ್ಯಾಂಡ್​ಗಳು ಮತ್ತು ಆನ್‌ಲೈನ್ ಜಾಲಗಳು, ಇಂತಹ ವೇದಗಳು ಮತ್ತು ಪುರಾಣಗಳ ಮಂತ್ರಗಳೊಂದಿಗೆ ಮುದ್ರಿಸಲಾದ ಕುರ್ತಾ ಮತ್ತು ಟಿ-ಶರ್ಟ್‌ಗಳಂತಹ ಬಟ್ಟೆಗಳನ್ನು ಮಾರಾಟ ಮಾಡುತ್ತಿವೆ. ಇದು ಸರಿಯಲ್ಲ. ಇಂಥಾ ಬಟ್ಟೆಗಳನ್ನು ಧರಿಸಬೇಡಿ" ಎಂದು ಎಚ್ಚರಿಸಿದರು.

"ಬಟ್ಟೆಗಳ ಮೇಲಿನ ಮಂತ್ರ ಸರಿಯಾದ ಮಾರ್ಗವಲ್ಲ. ಕಲಿಯುಗದಲ್ಲಿ ಅನೇಕ ಜನರು ಇಂತಹ ಬಟ್ಟೆಗಳನ್ನು ಧರಿಸಲು ಶುರು ಮಾಡಿದ್ದಾರೆ. ಮೊದಲಿಗೆ ಈ ರೀತಿಯ ವಸ್ತುಗಳನ್ನು ನಿಷೇಧಿಸಬೇಕು. ಆ ಬಟ್ಟೆಗಳ ಮೇಲೆ ವೇದ ಮಂತ್ರವಿದೆ. ಅದು ನಮ್ಮ ಹೃದಯದಲ್ಲಿ ಮಾತ್ರ ಇರಬೇಕು. ಬಟ್ಟೆಗಳ ಮೇಲಲ್ಲ. ಈ ಮಂತ್ರವನ್ನು ಗುರುಗಳಿಂದ ಕಲಿತು ಮನಸ್ಸಿನಲ್ಲಿ ಜಪಿಸಬೇಕು" ಎಂದು ಯುವಜನತೆಗೆ ಕಿವಿಮಾತು ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net