ಶತಕ ಬಾರಿಸಿದ ಶುಭಮನ್​ ಗಿಲ್​ಗೆ ತಟ್ಟಲಿದೆ ದಂಡದ ಬಿಸಿ! ಈ ಬಗ್ಗೆ ಐಸಿಸಿ 19.45 ನಿಯಮ ಹೇಳುವುದೇನು? | Shubman Gill

ವಿಜಯವಾಣಿ (80)
Published on

Shubman Gill: ಜೂನ್​ 20ರಂದು ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಇನ್ನಿಂಗ್ಸ್​ ನೀಡಿತು. ಶತಕದಾಟ ಮೂಲಕ ಎಲ್ಲರ ಗಮನ ಸೆಳೆದ ನಾಯಕ ಶುಭಮನ್ ಗಿಲ್​ಗೆ ಇದೀಗ ಐಸಿಸಿಯಿಂದ ದಂಡ ಬೀಳುವ ಸಾಧ್ಯತೆಯಿದೆ. ತಂಡದ ಪರ ಉತ್ತಮ ಇನ್ನಿಂಗ್ಸ್​ ನೀಡಿದ್ದೇ ಆದರೂ ಮಾಡಿದ ಅದೊಂದು ತಪ್ಪಿಗೆ ಗಿಲ್ ಐಸಿಸಿ ವಿಧಿಸುವ ದಂಡಕ್ಕೆ ಗುರಿಯಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್​ ವರದಿಗಳು ಹೇಳಿವೆ.

ಕಪ್ಪು ಸಾಕ್ಸ್​ ಧರಿಸುವಂತಿಲ್ಲ

ಐಸಿಸಿ 19.25 ನಿಯಮ ಪ್ರಕಾರ, ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ಬಿಳಿ, ಕ್ರೀಮ್​ ಅಥವಾ ಲೈಟ್​ ಗ್ರೇ ಬಣ್ಣದ ಸಾಕ್ಸ್ ಮಾತ್ರ ಧರಿಸಬೇಕು. ಇದು ಐಸಿಸಿ ವಿಧಿಸಿರುವ ಕಡ್ಡಾಯ ನಿಮಯ. ಹೀಗಿರುವಾಗಲೇ ನಿನ್ನೆ ಆಡಿದ ಟೆಸ್ಟ್​ ಪಂದ್ಯದಲ್ಲಿ ಗಿಲ್ ಕಪ್ಪು ಬಣ್ಣದ ಸಾಕ್ಸ್​ ಧರಿಸಿರುವುದು ಐಸಿಸಿ ಗಮನಕ್ಕೆ ಬಂದಿದೆ. ಇದು ಐಸಿಸಿಯ ಮೂಲ ನಿಯಮ ಉಲ್ಲಂಘನೆ ಎಂಬುದು ಸ್ಪಷ್ಟವಾಗಿದೆ.

ದಂಡದ ಮೊತ್ತ ಎಷ್ಟು?

ಮೊದಲ ದಿನದ ಟೆಸ್ಟ್​ನಲ್ಲಿ ಕಪ್ಪು ಬಣ್ಣದ ಸಾಕ್ಸ್ ಧರಿಸಿ ಕ್ರೀಸ್​ಗೆ ಬಂದ ಶುಭಮನ್ ಗಿಲ್, ಐಸಿಸಿ ನಿಯಮವನ್ನು ಉಲ್ಲಂಘಿಸಿರುವುದು ಸ್ಪಷ್ಟ. ಇದರ ಪರಿಣಾಮವಾಗಿ, ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಐಸಿಸಿ ಭಾರಿ ದಂಡ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನು ಲೆವೆಲ್ 1 ತಪ್ಪು ಎಂದು ಪರಿಗಣಿಸಿದರೆ, ಪಂದ್ಯ ಶುಲ್ಕದ ಶೇ.10ರಿಂದ 20ರಷ್ಟು ದಂಡ ವಿಧಿಸುವ ಸಾಧ್ಯತೆಯಿದೆ. ಆದಾಗ್ಯೂ, ಗಿಲ್ ಉದ್ದೇಶಪೂರ್ವಕವಾಗಿ ಕಪ್ಪು ಸಾಕ್ಸ್ ಧರಿಸಿಲ್ಲ ಎಂದು ರೆಫರಿ ಭಾವಿಸಿದರೆ, ಆ ದಂಡವನ್ನು ತಪ್ಪಿಸಬಹುದು. ದಂಡ ವಿಧಿಸಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ಪಂದ್ಯದ ಅಂಪೈರ್​ ನಿರ್ಧಾರದ ಮೇಲೆ ನಿಂತಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net