

Monthly Pension: ರಾಜ್ಯದಲ್ಲಿನ ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಈ ಹಿಂದೆ ನೀಡಲಾಗುತ್ತಿದ್ದ 400 ರೂ. ಮಾಸಿಕ ಪಿಂಚಣಿ ಹಣವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ದಿಢೀರ್ ಹೆಚ್ಚಿಸಿದ್ದಾರೆ.
400 ರೂ.ನಿಂದ 1,100 ರೂ.ಗೆ ಹೆಚ್ಚಿಸಿರುವ ಸಿಎಂ, ಈ ಬದಲಾವಣೆಯ ಪಿಂಚಣಿ ಹಣ ಇದೇ ಜುಲೈನಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಈ ನಿರ್ಧಾರವು ರಾಜ್ಯದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ 1,09,69,255 ಫಲಾನುಭವಿಗಳಿಗೆ ಲಭ್ಯವಾಗಲಿದೆ ಎಂದಿದ್ದಾರೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟುಕೊಂಡು ಈ ಘೋಷಣೆ ಹೊರಡಿಸಿರುವುದು ಸದ್ಯ ರಾಜಕೀಯ ಚರ್ಚೆಗೆ ಕಾರಣವಾಗಿದೆ.
"ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ, ಎಲ್ಲಾ ವೃದ್ಧರು, ಅಂಗವಿಕಲರು ಮತ್ತು ವಿಧವೆಯ ಮಹಿಳೆಯರು ಈಗ ಪ್ರತಿ ತಿಂಗಳು 400 ರೂ. ಬದಲಿಗೆ 1,100 ರೂ.ಗಳ ಪಿಂಚಣಿ ಹಣವನ್ನು ಪಡೆಯುತ್ತಾರೆ ಎಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಖುಷಿಯಿದೆ. ಇದೇ ಜುಲೈನಿಂದ ಬದಲಾವಣೆಯ ಪಿಂಚಣಿಯು ಎಲ್ಲಾ ಫಲಾನುಭವಿಗಳಿಗೆ ಸಿಗಲಿದೆ. ತಿಂಗಳ 10ನೇ ತಾರೀಖಿನಂದು ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುವುದು. ಇದು 1 ಕೋಟಿ 9 ಲಕ್ಷ 69 ಸಾವಿರ 255 ಫಲಾನುಭವಿಗಳಿಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತದೆ" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಜನತಾದಳ (ಯುನೈಟೆಡ್) ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದಲ್ಲಿರುವ ಅದರ ಮಿತ್ರಪಕ್ಷಗಳು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ವಿರುದ್ಧ ತಮ್ಮ ಸ್ಥಾನವನ್ನು ಬಲಪಡಿಸಲು ಸಾಕಷ್ಟು ಕಸರತ್ತು ನಡೆಸುತ್ತಿವೆ,(ಏಜೆನ್ಸೀಸ್).