

ಶಿಮ್ಲಾ: ಮೊನ್ನೆಮೊನ್ನೆ ತಾನೆ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಪೈನಾಪಲ್ ತಿಂದು, ಬಾಯಿಯೆಲ್ಲ ಗಾಯಗೊಂಡು, ಆಹಾರ, ನೀರು ಸೇವಿಸಲಾಗದೆ ಸಣಕಲಾಗಿ ಮೃತಪಟ್ಟಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾದ ಆರೋಪಿಯೋರ್ವ, ಆನೆ ತಿಂದಿದ್ದು ಅನಾನಸ್ ಹಣ್ಣನ್ನಲ್ಲ, ಸ್ಫೋಟಕವಿದ್ದ ತೆಂಗಿನಕಾಯಿಯನ್ನು ಎಂದು ಹೇಳಿಕೆಯನ್ನೂ ನೀಡಿದ್ದಾನೆ. ಈ ಘಟನೆಗೆ ರಾಷ್ಟ್ರಾದ್ಯಂತ ವಿಪರೀತ ಖಂಡನೆ ವ್ಯಕ್ತವಾಗಿದೆ. ಇನ್ನೂ ಆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಂಥದ್ದೇ ಇನ್ನೊಂದು ಕ್ರೂರ ಘಟನೆ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ
ಹಿಮಾಚಲಪ್ರದೇಶದ ಬಿಲಾಸ್ಪುರ ಜಿಲ್ಲೆಯ ಜಾಂಡುಟಾ ಎಂಬ ಪ್ರದೇಶದಲ್ಲಿ ಗರ್ಭಿಣಿ ಹಸುವಿನ ಬಾಯಲ್ಲಿ ಸ್ಫೋಟಕ ಸ್ಫೋಟಿಸಿದೆ. ಗದ್ದೆಯಲ್ಲಿ ಅದು ಓಡಾಡುತ್ತ, ಮೇವು ತಿನ್ನುತ್ತಿತ್ತು. ಆಗ ತಿಂದ ಒಂದು ವಸ್ತುವೊಂದು ಅದರ ಬಾಯಲ್ಲಿ ಬ್ಲಾಸ್ಟ್ ಆಗಿದೆ ಎಂದು ವರದಿಯಾಗಿದೆ.
ಆ ಗರ್ಭಿಣಿ ಹಸುವಿನ ಬಾಯಿ ರಕ್ತಸಿಕ್ತವಾಗಿದ್ದು, ಅದೇ ಸ್ಥಿತಿಯಲ್ಲಿ ಅದು ಒದ್ದಾಡುತ್ತಿರುವ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
10 ದಿನಗಳ ಹಿಂದೆಯೇ ಘಟನೆ ನಡೆದಿದೆ ಎನ್ನಲಾಗಿದೆ. ಹಸುವಿನ ದವಡೆ, ಬಾಯಿಯೆಲ್ಲ ಗಾಯಗೊಂಡಿದ್ದರಿಂದ ಅದೂ ಕೂಡ ಕೆಲವು ದಿನಗಳಿಂದ ಆಹಾರ ಸೇವನೆ ಮಾಡುತ್ತಿಲ್ಲ. ನೋವಿನಿಂದ ಒದ್ದಾಡುತ್ತಿದೆ ಎಂದು ಅದರ ಮಾಲೀಕ ಗುರುಡಿಯಲ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ
ಬೇಕಂತಲೇ ಹಸುವಿನ ಬಾಯಲ್ಲಿ ಸ್ಫೋಟಕವನ್ನು ಸ್ಫೋಟಿಸಲಾಗಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ನನಗೆ ನನ್ನ ನೆರಮನೆಯವರ ಮೇಲೆಯೇ ಅನುಮಾನ ಇದೆ. ಈ ಘಟನೆ ನಡೆದ ಮೇಲೆ ಆತ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಗರುಡಿಯಲ್ ಸಿಂಗ್ ಅವರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.