More

    ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್​​ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ

    ಮಲಪ್ಪುರಂ: ಕೆಲವು ಮನುಷ್ಯರು ಅದೆಷ್ಟು ಕ್ರೂರಿಗಳು ಎಂಬುದಕ್ಕೆ ಸಾಕ್ಷಿಯಾಗಿ ಕೇರಳದಲ್ಲಿ ಘಟನೆಯೊಂದು ನಡೆದಿದೆ. ಒಂದು ಗರ್ಭಿಣಿ ಆನೆ ದಾರುಣವಾಗಿ, ನಿಂತ ಸ್ಥಿತಿಯಲ್ಲೇ ಮೃತಪಟ್ಟಿದೆ. ಅದೊಂದು ಭಯಾನಕ, ಕರುಳು ಹಿಂಡುವ ಸನ್ನಿವೇಶ ಎಂದು ಸ್ಥಳೀಯ ಅರಣ್ಯಾಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ವಿವರಿಸಿದ್ದಾರೆ.

    ಉತ್ತರ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಹೊಟ್ಟೆಯಲ್ಲಿ ಪುಟ್ಟ ಮರಿಯನ್ನು ಇಟ್ಟುಕೊಂಡ ಕಾಡಾನೆ ಆಹಾರ ಅರಸುತ್ತ ಸ್ಥಳೀಯ ಹಳ್ಳಿಗೆ ಬಂದಿತ್ತು. ಅಲ್ಲೇ ಅಲೆದಾಡುತ್ತಿತ್ತು. ಅದು ರಸ್ತೆಯಲ್ಲಿ ಓಡಾಡುತ್ತಿದ್ದಾಗ, ಆ ಹಳ್ಳಿಯ ಕೆಲವರು ಒಂದು ಪೈನಾಪಲ್​​ ಹಣ್ಣನ್ನು ಆನೆಗೆ ತಿನ್ನಲು ಕೊಟ್ಟರು. ಅದನ್ನು ತಿಂದಿದ್ದೇ ಆನೆಯ ಸಾವಿಗೆ ಕಾರಣವಾಯಿತು. ಇದನ್ನೂ ಓದಿ: ಚಿಕಿತ್ಸೆ ನೀಡುತ್ತಾ ಕರೊನಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗಿದ್ದ ಚೀನಾ ವೈದ್ಯ ಮೃತ

    ಆನೆಗೆ ಪೈನಾಪಲ್​ ಹಣ್ಣು ಕೊಟ್ಟವರು ಅದರೊಳಗೆ ಪಟಾಕಿಯಂಥ ಸ್ಫೋಟಕವನ್ನಿಟ್ಟು ನೀಡಿದ್ದರು. ಗರ್ಭಿಣಿ ಆನೆ ಅದನ್ನು ಬಾಯಿಗೆ ಇಟ್ಟು ಅಗಿಯುತ್ತಿದ್ದಂತೆ ಒಳಗೇ ಸ್ಫೋಟಗೊಂಡಿದೆ. ಇದರಿಂದ ಆ ಮುಗ್ಧ ಪ್ರಾಣಿಯ ಬಾಯಿ ಒಳಗೆ ವಿಪರೀತ ಗಾಯವಾಗಿ, ಸಂಕಟಪಡುತ್ತ, ಇಡೀ ಹಳ್ಳಿಯಲ್ಲಿ ಅಲೆದಾಡಿದೆ. ಆ ಉರಿಯ ಶಮನಕ್ಕಾಗಿ ಒಂದು ಹೊಳೆಗೆ ಹೋಗಿ ನಿಂತಿದೆ. ಅಲ್ಲೇ, ನಿಂತ ಸ್ಥಿತಿಯಲ್ಲೇ ಸಂಕಟಪಡುತ್ತ ದಯನೀಯವಾಗಿ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

    ಫೋಟೋದೊಂದಿಗೆ ಫೇಸ್​ಬುಕ್​ ಪೋಸ್ಟ್ ಹಾಕಿರುವ ಮೋಹನ್ ಕೃಷ್ಣನ್​, ಕಾಡಿನಿಂದ ಬಂದಿದ್ದ ಹೆಣ್ಣಾನೆ ಆಹಾರಕ್ಕಾಗಿ ಅಲೆದಾಡುತ್ತಿತ್ತು. ಅದು ಸ್ಥಳೀಯರಿಗೆ ಯಾವ ಹಾನಿಯನ್ನೂ ಮಾಡಿರಲಿಲ್ಲ. ಅದಕ್ಕೆ ಸ್ವಾರ್ಥಿ ಮನುಷ್ಯನ ಬಗ್ಗೆ ಗೊತ್ತಿಲ್ಲ. ಹಾಗಾಗಿ ಅವನ ಮೇಲೆ ನಂಬಿಕೆ ಇಟ್ಟು, ಕೊಟ್ಟ ಹಣ್ಣನ್ನು ತಿಂದಿತು. ಇನ್ನು 18-20 ತಿಂಗಳಲ್ಲಿ ಅದು ತನ್ನ ಮರಿಗೆ ಜನ್ಮ ನೀಡುತ್ತಿತ್ತು. ಹಣ್ಣಿನ ಸ್ಫೋಟದಿಂದ ಬಾಯಿಯಲ್ಲಿ ಗಾಯವಾಗಿ, ಇಡೀ ಹಳ್ಳಿ ತುಂಬ ಅಲೆದಾಡುತ್ತಿದ್ದರೂ ಒಬ್ಬೇ ಒಬ್ಬ ಮಾನವನ ಮೇಲೆ ಅದು ದಾಳಿ ಮಾಡಿಲ್ಲ. ಯಾವ ಮನೆಯನ್ನೂ ನಾಶ ಮಾಡಿಲ್ಲ. ಆ ಹೆಣ್ಣಾನೆ ತುಂಬ ಒಳ್ಳೆಯದಾಗಿತ್ತು ಎಂದು ಕೃಷ್ಣನ್​ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ತನ್ನ ಬಾಯಿಯ ಉರಿಯನ್ನು ಶಮನ ಮಾಡಿಕೊಳ್ಳಲು ನೀರಿನಲ್ಲಿ ಸೊಂಡಿಲು, ಬಾಯಿಯನ್ನು ಹಾಕಿ ನಿಂತ ಆನೆಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ತನ್ನ ಗಾಯಕ್ಕೆ ನೊಣಗಳು, ಉಳಿದ ಹುಳಗಳು ಬಾರದಂತೆ ತಡೆಯಲು ಆನೆ ಹೀಗೆ ಮಾಡಿತ್ತು ಎಂದು ಮೋಹನ್​ ಕೃಷ್ಣನ್​ ತಿಳಿಸಿದ್ದಾರೆ.

    ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿ, ಹಳ್ಳಿಯಿಂದ ಕರೆದುಕೊಂಡು ಹೋಗಿದ್ದರು. ಆದರೆ ಅದಾದ ಕೆಲವೇ ಗಂಟೆಯಲ್ಲಿ ನೀರಿನಲ್ಲಿ ನಿಂತ ಸ್ಥಿತಿಯಲ್ಲೇ ಅದು ಮೃತಪಟ್ಟಿದೆ. ಘಟನೆಯ ಬಳಿಕ ಇನ್ನೆರಡು ಆನೆಗಳನ್ನು ಕರೆತಂದು ಹೆಣ್ಣಾನೆಯ ಮೃತದೇಹವನ್ನು ನೀರಿನಿಂದ ಹೊರಗೆ ಎಳೆಯಲಾಗಿದೆ. ಇದನ್ನೂ ಓದಿ: ಸಂಪಾದಕೀಯ| ಫಲಾನುಭವಿಗಳಿಗೆ ಸೌಲಭ್ಯ ಸರಿಯಾಗಿ ಸಿಗಲಿ

    ಅರಣ್ಯ ಸಿಬ್ಬಂದಿಯೆಲ್ಲ ಸೇರಿ ಹೆಣ್ಣಾನೆಯ ದೇಹಕ್ಕೆ, ಸಂಪ್ರದಾಯಬದ್ಧವಾಗಿ, ಎಲ್ಲ ರೀತಿಯ ಗೌರವಗಳನ್ನೂ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ನಾವೆಲ್ಲರೂ ತಲೆ ತಗ್ಗಿಸಿ ನಿಂತು, ಮೌನ ಆಚರಣೆ ಮಾಡಿದ್ದೇವೆ, ಅದಕ್ಕೆ ಗೌರವ ಸಲ್ಲಿಸಿದ್ದೇವೆ ಎಂದು ಕೃಷ್ಣನ್​ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    ‘ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ…’ ಯುಎಎಸ್​ ಅ​​ಧ್ಯಕ್ಷ ಟ್ರಂಪ್​ಗೆ ಪೊಲೀಸ್​ ಚೀಫ್​​ ತೀಕ್ಷ್ಣ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts