More

    ಸಂಪಾದಕೀಯ| ಫಲಾನುಭವಿಗಳಿಗೆ ಸೌಲಭ್ಯ ಸರಿಯಾಗಿ ಸಿಗಲಿ

    ಕರೊನಾ ಸೋಂಕಿನ ಹಾವಳಿ ಮತ್ತು ದಿಗ್ಬಂಧನದಿಂದ ದೇಶದ ಅರ್ಥವ್ಯವಸ್ಥೆಗೆ ಭಾರಿ ಪೆಟ್ಟು ಬಿದ್ದಿದೆ. ಬಹುತೇಕ ವಲಯಗಳು ನಷ್ಟದ ಸುಳಿಗೆ ಸಿಲುಕಿದ್ದು, ಮತ್ತೆ ಚೈತನ್ಯ ಪಡೆದುಕೊಳ್ಳುವ ಹಾದಿಯನ್ನು ಹುಡುಕುತ್ತಿವೆ. ಅದರಲ್ಲೂ, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್​ಎಂಇ) ಭಾರಿ ಸಂಕಷ್ಟ ಎದುರಿಸುತ್ತಿವೆ. ಆಲ್ ಇಂಡಿಯಾ ಮ್ಯಾನುಫ್ಯಾಕ್ಚರ್ಸ್ ಆರ್ಗನೈಸೇಶನ್ ಮೇ 24ರಿಂದ ಮೇ 30ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಕುರಿತು ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ. ಎಂಎಸ್​ಎಂಇಯ ಶೇಕಡ 35ರಷ್ಟು ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಉದ್ಯಮವನ್ನು ಮೊದಲಿನಂತೆ ಎದ್ದು ನಿಲ್ಲಿಸಲು ಕನಿಷ್ಠ ಆರು ತಿಂಗಳ ಅವಧಿ ಬೇಕಾಗುತ್ತದೆ ಎಂದು ಶೇ.32 ಎಂಎಸ್​ಎಂಇಗಳು ಹೇಳಿವೆ. ಕಳವಳದ ಸಂಗತಿ ಎಂದರೆ ಕೆಲ ಉದ್ಯಮಗಳು ಶಾಶ್ವತವಾಗಿ ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ. ಈ ಸ್ಥಿತಿಯನ್ನೆಲ್ಲ ಅವಲೋಕಿಸಿಯೇ ಕೇಂದ್ರ ಸರ್ಕಾರ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಕ್ಷಣೆಗಾಗಿ 20 ಸಾವಿರ ಕೋಟಿ ರೂಪಾಯಿ ಪರಿಹಾರ ನಿಧಿ ಘೊಷಣೆ ಮಾಡಿದ್ದು, ಈ ಹಣವನ್ನು ಉದ್ದಿಮೆಗಳ ಪ್ರವರ್ತಕರಿಗೆ ನೀಡುವುದಾಗಿ ತಿಳಿಸಿದೆ. 5 ಲಕ್ಷ ರೂಪಾಯಿವರೆಗಿನ ಸಾಲದ ಹಣದಲ್ಲಿ 85 ಪ್ರತಿಶತದವರೆಗೆ ಗ್ಯಾರಂಟಿ ಕವರೇಜ್ ಅನ್ನು ಸರ್ಕಾರ ನೀಡಲಿದೆ.

    ಇದನ್ನೂ ಓದಿ: ಜುಲೈ 1ರಿಂದಲೇ ಹಂತ ಹಂತವಾಗಿ ಶಾಲೆ ಶುರು? : ಸಂದೇಹ ಮೂಡಿಸಿದೆ ಶಿಕ್ಷಣ ಇಲಾಖೆ ಸುತ್ತೋಲೆ..

    ಸ್ವಾವಲಂಬಿ ಭಾರತ ಯೋಜನೆ ಅಡಿಯಲ್ಲಿ, ಕಿರು ಉತ್ಪಾದನೆ ಮತ್ತು ಸೇವೆಗಳ ಘಟಕಗಳಿಗೆ 1 ಕೋಟಿ ರೂಪಾಯಿ ಹೂಡಿಕೆ ಮತ್ತು ವಹಿವಾಟಿನ ಮೊತ್ತವನ್ನು 5 ಕೋಟಿ ರೂಪಾಯಿಗೆ, ಸಣ್ಣ ಘಟಕದ ಮಿತಿಯನ್ನು  10 ಕೋಟಿ ರೂಪಾಯಿ ಹೂಡಿಕೆ ಮತ್ತು  50 ಕೋಟಿ ರೂಪಾಯಿ ವಹಿವಾಟಿಗೆ ಹೆಚ್ಚಿಸಲಾಗಿದೆ. ಸಾಲ ಸುಲಭವಾಗಿ ಸಿಗುವಂತೆ ನಿಯಮಗಳಿಗೆ ಮಾರ್ಪಾಡು ಮಾಡಲಾಗಿದ್ದು, ಎಂಎಸ್​ಎಂಇ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಘೋಷಣೆ, ಕ್ರಮಗಳಿಂದ ಸ್ವಾಭಾವಿಕವಾಗಿಯೇ ಎಂಎಸ್​ಎಂಇ ವಲಯ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಸರ್ಕಾರವೇನೋ ಸಕಾಲದಲ್ಲಿ ಸಹಾಯ ಘೋಷಿಸಿದೆ. ಆದರೆ, ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹೊಣೆಗಾರಿಕೆ, ಫಲಾನುಭವಿಗಳಿಗೆ ಸಾಲ ಮತ್ತು ಇತರ ನೆರವು ತಲುಪುವಂತೆ ಮಾಡುವ ಬದ್ಧತೆ ಬ್ಯಾಂಕುಗಳಿಗೆ ಸೇರಿದ್ದು.

    ಇದನ್ನೂ ಓದಿ:  ಜೂ. 5ರಂದು ಚಂದ್ರಗ್ರಹಣ: ಇಲ್ಲಿದೆ ಗೋಚರಿಸುವ ಸ್ಥಳ, ಸಮಯ ಮತ್ತಿತರ ವಿವರ

    ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ವಿನಾಯಿತಿಗಳನ್ನು ಘೋಷಿಸಿದರೂ, ಬಹುತೇಕ ಬ್ಯಾಂಕುಗಳು ಅದನ್ನು ಜನಸಾಮಾನ್ಯರಿಗೆ ದಾಟಿಸಲೇ ಇಲ್ಲ ಎಂಬುದು ಕಣ್ಣಿಗೆ ಕಾಣುವ ಸತ್ಯ. ಎಂಎಸ್​ಎಂಇಗಳ ವಿಚಾರದಲ್ಲೂ ಹಾಗೇ ಆದರೆ ಸರ್ಕಾರದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಬಿಡುವುದಲ್ಲದೆ, ಈ ವಲಯದ ಜನರ ಕಷ್ಟ ಮತ್ತಷ್ಟು ಹೆಚ್ಚುತ್ತದೆ. ಬ್ಯಾಂಕುಗಳು ತಮ್ಮ ಮೇಲಿರುವ ಮಹತ್ತರ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ನೆರವನ್ನು ಪರಿಣಾಮಕಾರಿಯಾಗಿ ಆಯಾ ವಲಯಗಳಿಗೆ, ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು.

    ಬೆಳ್ಳಿಯಲ್ಲಿ ತಯಾರಾಯ್ತು ಅತಿ ಸಣ್ಣ ವಿಜಯ ರಥ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts