More

    ಸಂಪಾದಕೀಯ| ಸಂಕಷ್ಟದ ಸನ್ನಿವೇಶ

    ರಾಜ್ಯದ ಕೆಲವೆಡೆ ನೆರೆ, ಕೆಲವೆಡೆ ಬರ ಪರಿಸ್ಥಿತಿ ತಲೆದೋರಿದೆ. ಆಗಸ್ಟ್ ಸಮೀಪಿಸುತ್ತಿದ್ದರೂ ರಾಜ್ಯದ ಹಲವೆಡೆ ಇನ್ನೂ ವಾಡಿಕೆ ಪ್ರಮಾಣದ ಮಳೆ ಆಗದಿರುವುದು ಆತಂಕಕಾರಿ. ಮುಂದಿನ ದಿನಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಬಹುದಾದರೂ ಕೃಷಿ ಇಳುವರಿ ಮೇಲೆ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ. ಹವಾಮಾನ ವೈಪರೀತ್ಯದ ಪರಿಣಾಮ ಈಗಾಗಲೇ ಬಹುತೇಕ ದೇಶಗಳ ಮೇಲೆ ಪರಿಣಾಮ ಬೀರಿರುವುದು ನಮ್ಮ ಅರಿವಿಗೂ ಬಂದಿದೆ.

    ಮಳೆ ವಿಳಂಬ ಮತ್ತು ಕೊರತೆಯಿಂದ ಕೃಷಿ ಉತ್ಪನ್ನಗಳ ಇಳುವರಿ ಕುಸಿಯಲಿದೆ. ಇದು ಸಹಜವಾಗಿ ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಪ್ರಮಾಣವನ್ನು ಹೆಚ್ಚಿಸಲಿದ್ದು ಪರಿಣಾಮ ಇನ್ನಷ್ಟು ಬೆಲೆಯೇರಿಕೆಯಾಗಲಿದೆ ಎಂಬುದು ತಜ್ಞರ ವಿಶ್ಲೇಷಣೆ.

    ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನೆರೆ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲೂ ನೆರೆ-ಬರ ಪರಿಸ್ಥಿತಿ. ಸಹಜವಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಆತಂಕ ಎದುರಾಗಿದೆ. ಇದುವರೆಗೆ ಟೊಮ್ಯಾಟೊ ಬೆಲೆ ಮಾತ್ರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಈಗ ಟೊಮೆಟೊ ಸಾಲಿಗೆ ಇನ್ನೂ ಹಲವು ತರಕಾರಿಗಳು ಸೇರಿವೆ. ಆಹಾರ ಪದಾರ್ಥಗಳ ಬೆಲೆಯಲ್ಲೂ ಏರಿಕೆ ಉಂಟಾಗಿದೆ. ಮಳೆಯಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಿ ಏರುಪೇರಾಗಿರುವುದೂ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

    ರಾಜ್ಯದ ಹಲವೆಡೆ ನಿರೀಕ್ಷಿತ ಮಳೆಯಾಗದ ಕಾರಣ ಕುಡಿಯುವ ನೀರಿನ ಅಭಾವದ ಲಕ್ಷಣಗಳೂ ಗೋಚರಿಸಿವೆ. ಪರಿಸ್ಥಿತಿಯನ್ನು ಅರಿತಿರುವ ರಾಜ್ಯ ಸರ್ಕಾರ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಿ ಈ ಹಿಂದೆ ಪ್ರತಿ ಜಿಲ್ಲೆಗೆ ಒದಗಿಸಿದ್ದ 1 ಕೋಟಿ ರೂ.ಗಳ ಜತೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿದೆಯಾದರೂ ಇನ್ನಷ್ಟು ಮುನ್ನೆಚ್ಚರಿಕೆ ಅತ್ಯವಶ್ಯವಾಗಿದೆ.

    ತಮಿಳುನಾಡು ಸರ್ಕಾರ ಈಗಾಗಲೇ ಕಾವೇರಿ ನೀರಿಗೆ ಕ್ಯಾತೆ ಶುರುಮಾಡಿದೆ. ಕರ್ನಾಟಕ ಸರ್ಕಾರ ಒಪ್ಪಂದದ ಪ್ರಕಾರ ಕಾವೇರಿ ನೀರು ಬಿಡುಗಡೆ ಮಾಡಿಲ್ಲ. ಅಲ್ಪಾವಧಿ ಬೆಳೆ ರಕ್ಷಣೆಗೆ ನೀರು ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ತಮಿಳುನಾಡು ಬೇಡಿಕೆ ಈಡೇರಿಸುವುದು ಕಷ್ಟಸಾಧ್ಯ. ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಹುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ನೆರೆಹಾವಳಿ ಲಕ್ಷಣಗಳು ಸ್ಪಷ್ಟವಾಗಿವೆ. ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದರೆ ಕೃಷ್ಣೆ ಭಾಗದ ಜನಜೀವನ ಏರುಪೇರಾಗಲಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ರಾಜ್ಯ ಸರ್ಕಾರ ನೆರೆ ಮತ್ತು ಬರ ಎರಡೂ ಪರಿಸ್ಥಿತಿ ನಿರ್ವಹಣೆಗೆ ಸಮರ ಸಿದ್ಧತೆ ನಡೆಸಬೇಕಿದೆ.

    ಇಂಗ್ಲೆಂಡ್​ ಕನಸು ಭಗ್ನಗೊಳಿಸಿದ ಮಳೆ; ಆಶಸ್​ ಟ್ರೋಫಿ ಉಳಿಸಿಕೊಂಡ ಆಸ್ಟ್ರೆಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts