ಹೊಸ ವರ್ಷ-2022: ಹೀಗಿದೆ ನಿಮ್ಮ ಭವಿಷ್ಯ...

Bhavishya
Published on
ಕಳೆದೆರಡು ವರ್ಷಗಳಿಂದ ಕರೊನಾ ಸಾಂಕ್ರಾಮಿಕವು ಜಗತ್ತನ್ನು ಕಂಗೆಡಿಸಿದೆ. ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಹೊಸ ರೂಪಾಂತರಿಗಳು ಪ್ರತ್ಯಕ್ಷವಾಗುತ್ತಿವೆ. 2022ರ ವರ್ಷ ಹೇಗಿರಬಹುದು? ಯಾವ ರಾಶಿಯವರಿಗೆ ಹೇಗಿದೆ? ಪ್ಲವನಾಮ ಸಂವತ್ಸರದ ಪುಷ್ಯ ಮಾಸ, ಫಾಲ್ಗುಣ ಹಾಗೂ ಶುಭಕೃತು ನಾಮ ಸಂವತ್ಸರದ ಮಾರ್ಗಶಿರ ಮಾಸದವರೆಗೆ ದ್ವಾದಶ ರಾಶಿಗಳ ಫಲಾಫಲವನ್ನು ಇಲ್ಲಿ ಸ್ಥೂಲವಾಗಿ ದಾಖಲಿಸಲಾಗಿದೆ.

ಮೇಷ

ಈ ರಾಶಿಯಲ್ಲಿ ಜನಿಸಿದವರ ಕಾಲವು ಅತ್ಯಂತ ಚೆನ್ನಾಗಿದ್ದು, ಮನೋಸಂಕಲ್ಪಗಳು ಈಡೇರುವ ಸಮಯ. ಏಕಾದಶದಲ್ಲಿ ಗುರುವಿದ್ದು, ಏ.2022ರಂದು ಅಲ್ಪಕಾಲಕ್ಕೆ ಶನಿಯು ಕುಂಭ ರಾಶಿಗೆ ಬರುತ್ತಾನೆ. ದುಶ್ಚಿಂತನೆ ಬಿಟ್ಟು ಸರ್ವರೂ ಸಮಾನರಾಗಿ ನಡೆಯಬೇಕೆಂಬ ದೃಷ್ಟಿಯಿಂದ ನಡೆದರೆ ದುಡ್ಡಿಗೆ ಚಿಂತೆಯಿಲ್ಲ. ವ್ಯಾಪಾರಿಗಳು ಹಾಗೂ ಕೃಷಿಕರು 2023ನೇ ಜನವರಿವರೆಗೂ ನಿಧಾನವಾಗಿ ಸಾಗಿ ಅಕಾಲಿಕ ಮಳೆ, ಚಂಡಮಾರುತಗಳಿಂದ ಅಲ್ಪ ತೊಂದರೆ ನಿರೀಕ್ಷಿಸಬಹುದು. ಪರಿಹಾರ- ಲೋಕಜ್ಞಾನವನ್ನೇ ಕೊಡುವ ಆರು ಮುಖವುಳ್ಳ ಸುಬ್ರಹ್ಮಣ್ಯನ ಪ್ರಾರ್ಥನೆಯೇ ಅತಿ ಮುಖ್ಯವಾದದ್ದು.

ವೃಷಭ

ರಾಹು-ಕೇತುಗಳ ಬದಲಾವಣೆ ನಿಮ್ಮ ಜೀವನವನ್ನು ಬದಲಾಯಿಸಲಿದೆ. ಏಪ್ರಿಲ್ ತಿಂಗಳಲ್ಲಿ ಮೀನರಾಶಿಗೆ ಗುರು ಬಂದು, ಏಕಾದಶಕ್ಕೆ ಬಂದು ಕಷ್ಟ-ಕೊರತೆ ನಿವಾರಿಸಿ, ದೃಢ ಆರೋಗ್ಯ, ಧನ ಸಂಪತ್ರಿಗೆ ಮಾರ್ಗ ತೋರಿಸಿ, ಮಾಡುವ ವ್ಯಾಪಾರದಲ್ಲಿ ಪ್ರಗತಿ ಕಂಡು ಸುಖವಾಗಿರುತ್ತೀರಿ. ಈ ನೂತನ ಸಂವತ್ಸರದ ನಾಯಕನು ಶನಿಯಾಗಿರುವುದರಿಂದ, ಶನಿಗ್ರಹದ ಅಂತರ್ಗತ ದೇವರಾದ ಈಶ್ವರನನ್ನು ಹಾಗೂ ಶನಿಮಹಾಸ್ತೋತ್ರವನ್ನು ನಿತ್ಯ ಪಾರಾಯಣ ಮಾಡಿದರೆ ಈ ವರ್ಷವು ಸುಖದಾಯಕವಾಗಿರುತ್ತದೆ. ಜನ್ಮಕೊಟ್ಟ ಜನನಿಯನ್ನು, ಮಹಾಕಾಳಿ ಮಹಾಲಕ್ಷ್ಮೀಸ್ವರೂಪ ದುರ್ಗಾದೇವಿಯನ್ನು ಮರೆತರೆ ದಾರಿಯೇ ಕಾಣದಂತಾಗದು. ದುರ್ಗಾಸಹಸ್ರನಾಮ ಪಾರಾಯಣ ಮಾಡಿ. ಸಾಧ್ಯವಾದಲ್ಲಿ ದುರ್ಗಾದೀಪ ನಮಸ್ಕಾರ ಮಾಡಿಸಿ.

ಮಿಥುನ

ಮಿಥುನ ರಾಶಿಯ ಅಧಿಪತಿ ಲೋಕದ ಸೃಷ್ಟಿಯನ್ನು ಮಾಡಿರುವ ಮಹಾವಿಷ್ಣುವೇ. ಈ ಸದ್ಯದಲ್ಲಿ 9ನೇ ಮನೆಯಲ್ಲಿ ಗುರುವಿರುವುದು ಶುಭ ಸಮಯ. ಅಲ್ಪಕಾಲದಲ್ಲಿ ಶನಿಯು 8-9ರ ಸಂಚಾರದಲ್ಲಿದ್ದು, ಆರೋಗ್ಯ, ಧನವನ್ನು ಜೋಪಾನ ಕಾಪಾಡಿಕೊಳ್ಳಿ. ಅತಿರೇಕಕ್ಕೆ ಹೋಗದೆ ಖರ್ಚನ್ನು ಹತೋಟಿಯಲ್ಲಿಟ್ಟುಕೊಂಡರೆ ಚಿಂತೆಯೂ ಇಲ್ಲ, ಮನಸ್ಸು ಭಾರವಾಗುವುದೂ ಇಲ್ಲ. ವ್ಯಾಪಾರ ಮತ್ತು ವ್ಯವಸಾಯ ಮಾಡಲು ಅನುಕೂಲಕರ ಸಮಯ. ಆದರೂ ಕುಲಗುರುಗಳ ಸಲಹೆ ಪಡೆದು ಮುಂದೆ ಸಾಗಿ. ವಿಷ್ಣು ಸಹಸ್ರನಾಮವೇ ನಿಮ್ಮ ಜೀವನಕ್ಕೆ ಪರಮೌಷಧ ಹಾಗೂ ಅಭಿವೃದ್ಧಿ ಕೊಡುವುದಾಗಿರುತ್ತದೆ.

ಕಟಕ

ಜಲತತ್ತ್ವದ ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಶುದ್ಧವಾದ ಜಲದಂತೆ ಜೀವನ ನಡೆಸಬೇಕು. ಹಾಗೆಯೇ ಸಂವತ್ಸರದಲ್ಲಿ ವಿಪರೀತ ಗಾಳಿ, ಹವಾಮಾನ ವೈಪರೀತ್ಯ ಮುಟ್ಟುವುದರಿಂದ ಶೀತ ಹಾಗೂ ಶ್ವಾಸಕೋಶಕ್ಕೆ ಯಾವ ಶೀತವೂ ತಗಲದಂತೆ ನೋಡಿಕೊಂಡು ಏಪ್ರಿಲ್​ನಿಂದ ಗುರುವು 9ಕ್ಕೆ ಬರುವ ಶುಭಫಲ ಅನುಭವಿಸಿ. ಶನಿಯ ಅಷ್ಟಮ ಪ್ರವೇಶದ ಸಮಯದಲ್ಲಿ ಯಾವುದೇ ಬಂಡವಾಳ ಹೂಡಬೇಡಿ. ಏನು ಮಾಡುತ್ತಿರುವರೋ ಅದರಲ್ಲೇ ಮುಂದುವರಿದರೆ ಸುಖ, ಶಾಂತಿ ದೊರೆಯುವುದು. ಚಂದ್ರನ ಮನೆಯಲ್ಲಿ ಜನಿಸಿದವರು ನೀವು. ಚಂದ್ರ ಈಶ್ವರನ ಶಿರಸ್ಸಿನ ಮೇಲಿರುವನು. ಪ್ರತಿ ಸೋಮವಾರದಂದು ಈಶ್ವರನನ್ನು ಅರ್ಚಿಸಿ. ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ 2022ರಲ್ಲಿ ಎಲ್ಲಾ ವಿಷಯದಲ್ಲೂ ಜಾಗೃತರಾಗಿ ಸಾಗಿರಿ. ಯಾವ ಕಂಟಕ ಬರುವುದಿಲ್ಲ.

ಸಿಂಹ

ಯಾವ ಪ್ರಾಣಿಗೂ ಪರಮಾತ್ಮನು ರಾಜಪದವಿಯನ್ನು ಕೊಟ್ಟಿರುವುದಿಲ್ಲ. ಆದರೆ ಸಿಂಹರಾಶಿಗೆ ಅಧಿಪತಿ ದುರ್ಗಾಪರಮೇಶ್ವರಿಯ ವಾಹನ ಸಿಂಹವೇ ಸರಿ. ಸಮಯವು ಏ. 22ರವರೆಗೂ ಚೆನ್ನಾಗಿದ್ದು, ಗುರು ಅಷ್ಟಮಕ್ಕೆ ಬರುತ್ತಾನೆ. ಮೀನರಾಶಿ ಸ್ವಕ್ಷೇತ್ರವಾದ್ದರಿಂದ ಅಲ್ಲೂ ಯಾವ ತೊಂದರೆಯೂ ಇಲ್ಲ. ಜನವರಿ 2023ರವರೆಗೂ ಸಮಯವು ಅತ್ಯುತ್ತಮವಾಗಿದ್ದು, ಬೇಡಿದ ವರವನ್ನು ಕೊಡಲು ಉತ್ಸುಕರಾಗಿದ್ದಾರೆ. ಎಲ್ಲಾ ವಿಷಯದಲ್ಲೂ, ಕೀರ್ತಿ, ಲಾಭವನ್ನು ಪಡೆಯುವ ಸಮಯ. ದೇವರು ಕೊಟ್ಟಿದ್ದನ್ನು ಪರರಿಗೂ ಕೊಟ್ಟು ತಿನ್ನಬೇಕು. ದಾನವಿಲ್ಲದ ಜೀವನ ಧರ್ಮವಿಲ್ಲದ ಸಂಸಾರ ಎಂದೂ ಸುಖವಾಗಿ ಸಾಗದು. ದಾನವಿರಲಿ. ಧರ್ಮವಿರಲಿ. ಕೊಡುವ ದೇವರಿಗೆ ದಶಬಾಹುಗಳಿವೆ.

ಕನ್ಯಾ

ಅಂತೂ-ಇಂತೂ ನಿಮ್ಮ ಬಂಡಿಯೂ ಕಷ್ಟಕಾರ್ಪಣ್ಯಗಳನ್ನು ಹಿಂದೆ ಬಿಟ್ಟು ಮುಂದೆ ಬರುವ ಒಳ್ಳೆಯ ಕಾಲ ಆರಂಭವಾಗಲಿದೆ. ಏ. 22ರವರೆಗೂ ನೀವು ಹೀಗೆಯೇ ಮುಂದೆ ಸಾಗಿ. ತದನಂತರ ಷಷ್ಠ ಶನಿ, ಸಪ್ತಮ ಗುರು ನೀವು ಬೇಡಿದ್ದೆಲ್ಲಾ ಕೊಡುತ್ತಾರೆ. ಅಜ್ಞಾನದ ಪೊರೆಯನ್ನು ತೊರೆದು ಜ್ಞಾನದೃಷ್ಟಿಗೆ ಬನ್ನಿ. ಯಾರಿಗಾದರೂ ಮನಸ್ಸಿಗೆ ನೋವನ್ನು ನೀಡಿದ್ದರೆ ಪರಮಾತ್ಮನಲ್ಲಿ ಬೇಡಿ, ಪಶ್ಚಾತ್ತಾಪಪಟ್ಟು ಮುಂದೆ ಸಾಗಿದಲ್ಲಿ ಪಾಪಶೇಷವೂ ಉಳಿಯದೆ ಪರಮಾತ್ಮನು ಕಾಪಾಡುತ್ತಾನೆ. ನಿತ್ಯವೂ ಗುರುಚರಿತ್ರೆಯ 14ನೇ ಅಧ್ಯಾಯ ಮತ್ತು ಭಗವದ್ಗೀತೆಯ 11ನೇ ಅಧ್ಯಾಯ ಪಾರಾಯಣ ಮಾಡಿ. ಜೀವನವು ಇನ್ನಷ್ಟು ಸುಖಮಯವಾಗಿರುತ್ತದೆ.

ತುಲಾ

ಪ್ಲವನಾಮ ಸಂವತ್ಸರ ಪೂರ್ತಿ ಪಂಚಮ ಗುರುವು ಶುಭ, ಕೀರ್ತಿಯನ್ನು ತಂದು ಕೊಟ್ಟಿರುತ್ತಾನೆ. ಏ. 22ರ ನಂತರದಲ್ಲಿ ಗುರುವು ಷಷ್ಠಕ್ಕೆ ಬಂದು ಜನವರಿ 2023ರಲ್ಲಿ ಶನಿಯು ಪಂಚಮಕ್ಕೆ ಬರುತ್ತಾನೆ. ರಾಶಿಗಳಿಗೆ ರಾಜ ಎಂದರೆ ತುಲಾರಾಶಿಯೆ. ಕೈಲಿ ತಕ್ಕಡಿಯನ್ನು ಕೊಟ್ಟು ನ್ಯಾಯಮಾರ್ಗದಲ್ಲಿ ನಡೆದರೆ ಯಾವ ಭಯವೂ ಇಲ್ಲ. ಸದಾಚಾರ, ಕರುಣೆ, ಉಪಕಾರ, ಸಂಪತ್ತು ಬಂದಾಗ ಎಲ್ಲರಿಗೂ ಕೊಟ್ಟ ಸಂತೋಷ ನಿಮ್ಮನ್ನು ಕಾಪಾಡುತ್ತದೆ. ಅತ್ಯಂತ ಪ್ರತಿಷ್ಠೆಯ ಪದವಿಯನ್ನು, ಸುಖವನ್ನು ಕೊಡುತ್ತದೆ. ತಲೆ ಗಟ್ಟಿ ಎಂದು ಬಂಡೆಗೆ ಹೊಡೆದರೆ ಏನಾಗುವುದೆಂದು ಗೊತ್ತಿದೆ. ಅತಿಕಷ್ಟವನ್ನು ಮಿದುಳಿಗೆ ನೀಡಬೇಡಿ. ಕೈಗಾರಿಕೋದ್ಯಮಿಗಳು, ವೈದ್ಯರು, ಕೃಷಿಕರು ಈಗ ದುಡ್ಡು ಹೂಡಿದರೆ ಮುಂದೆ ಲಾಭವಾಗುತ್ತದೆ. ಶನಿಯು ಸ್ವಕ್ಷೇತ್ರಕ್ಕೆ ಬರುವುದರಿಂದ ಯಾವ ನಿರಾಸೆ, ದುಃಖವೂ ಬರುವುದಿಲ್ಲ. ಭಾನುವಾರದಂದು ಅಶ್ವತ್ಥ ವೃಕ್ಷದ ಪ್ರದಕ್ಷಿಣೆ, ಕುಲದೇವರ ಪ್ರಿಯವಾಗುವ ಸಹಸ್ರನಾಮ ಪಠಿಸಿ. ವಿಶೇಷವಾಗಿ ಲಕ್ಷ್ಮೀನರಸಿಂಹನನ್ನು ಪೂಜಿಸಿ, ಅರ್ಚಿಸಿ. ಶಾಶ್ವತ ಸುಖವೂ ದೊರೆಯುತ್ತದೆ.

ವೃಶ್ಚಿಕ

ತಿಳಿಯಾಗಿ ಸಾಗುತ್ತಿರುವ ನೀರನ್ನು ಕದಡಿದರೆ ರೊಚ್ಚೆ ಉಂಟಾಗಿ ನೀರಿನಲ್ಲಿ ಮಣ್ಣಿನಂಶ ಬರುತ್ತದೆ ಎಂದು ನೀವು ಕಂಡಿದ್ದೀರ. ರಾಶಿಯಲ್ಲಿ ಕೇತುವು ಅವನಿಗೆ ಸಪ್ತಮದಲ್ಲಿ ರಾಹುವೂ ಕುಳಿತಿದ್ದಾನೆ. ಶುಭಕೃತು ಸಂವತ್ಸರದಲ್ಲಿ ಪಂಚಮಕ್ಕೆ ಗುರು ಬಂದು ನಿಮ್ಮ ಯೋಗ್ಯತೆಗೆ ತಕ್ಕ ಗೌರವ, ಧನ, ಸುಖವನ್ನು ನೀಡುತ್ತಾನೆ. ಪ್ರತಿಮಾಸದಲ್ಲೂ ಗಣನಾಯಕನನ್ನು ಪೂಜಿಸಿ. ನಿಮ್ಮ ಆರ್ಥಿಕ ವ್ಯವಸ್ಥೆ ನೋಡಿಕೊಂಡು ಲಕ್ಷ್ಮೀನರಸಿಂಹನನ್ನು ವಿಶೇಷವಾಗಿ ಪೂಜಿಸಿ. ಚಂಡಿಕಾ ಹವನ ಮಾಡಿಸಿ, ಕುಲದೇವರನ್ನು ಪೂಜಿಸಿ. ಉತ್ತರಾಯಣದಲ್ಲಿ ಪಿತೃಗಳ ತೃಪ್ತಿಗಾಗಿ ಕ್ಷೇತ್ರಶ್ರಾದ್ಧವನ್ನು ಮಾಡಿಬನ್ನಿ.

ಧನುಸ್ಸು

ರಾಶ್ಯಾಧಿಪತಿ ತನ್ನ ಇನ್ನೊಂದು ಮನೆಯಾದ ಮೀನರಾಶಿಗೆ ಶುಭಕೃತುನಾಮ ಸಂವತ್ಸರದ ಆನಂತರದಲ್ಲಿ ನಾಲ್ಕನೇ ಮನೆಗೆ ಬರುತ್ತಾನೆ. ಆನಂತರದಲ್ಲಿ ಶನಿ ಸಂಚಾರವು ಮುಗಿಯುವ ಕಾಲವಾಗಿದ್ದು, ನಿಮಗೆ ಉನ್ನತ ಪದವಿಯತ್ತ ಕೊಂಡೊಯ್ಯುತ್ತದೆ. ಸಮಾಜಸೇವೆ, ಜನಸೇವೆ ಅಪೇಕ್ಷೆಯವರು, ಧನಿಕರು ಅಗತ್ಯವಿರುವವರಿಗೆ ಕೊಡುವ ಮಹಾಸಂಕಲ್ಪ ಮಾಡಿ. ಶನಿಯು ಕೀರ್ತಿ, ಆರೋಗ್ಯ, ಲಾಭವನ್ನು ಕೊಡುತ್ತಾನೆ. ಶ್ರೀರಾಮಚಂದ್ರನೊಬ್ಬನೇ ಮನುಷ್ಯಾವತಾರದಲ್ಲಿ ಅಯೋಧ್ಯೆಯನ್ನು ಆಳಿ ಜನೋಪಕಾರಿ ಕೆಲಸ ಮಾಡಿರುವವನು. ರಾಜಕೀಯದಲ್ಲಿ ಇಚ್ಛೆಯುಳ್ಳವರು ಧರ್ಮಯುಕ್ತರಾಗಿ, ಸತ್ಯಸಂಧರಾಗಿ ದೈವಕೃಪೆ ಬೇಡಿದರೆ ಜಯ ಲಭಿಸುವುದು. ದಿನಕ್ಕೊಂದು ಅಧ್ಯಾಯದಂತೆ ರಾಮಾಯಣ ಪಾರಾಯಣ ಮಾಡಿ. ಸಂದರಕಾಂಡ ಪಾರಾಯಣ ಮಾಡಿ. ಅಶ್ವಮೇಧಯಾಗದಲ್ಲಿ ಶ್ವೇತಾಶ್ವವನ್ನು ಕಟ್ಟಿದಂತೆ ಜಯವು ಸಿಗುವುದು.

ಮಕರ

ಮಾನವರಾಗಿ ಹುಟ್ಟಿದಮೇಲೆ ಗಣಪತಿಯನ್ನು ಪೂಜಿಸಿದ್ದೇವೆ. ದಾರಿಯಲ್ಲಿ ಆನೆಯು ನಡೆದು ಬಂದರೆ ಕೆಲವರು ದೂರದಿಂದ ನಮಸ್ಕರಿಸುತ್ತಾರೆ. ಇನ್ನು ಕೆಲವರು ಹಿಂದೆ ಇರುವವರು ನಮಸ್ಕಾರ ಮಾಡುವವರನ್ನು ನೋಡಿ ಅಲ್ಲಿಯೇ ನಿಲ್ಲುತ್ತಾರೆ. ಗಜರಾಜನು ಯಾರ ನಮಸ್ಕಾರವನ್ನು ಲೆಕ್ಕಿಸುವುದೂ ಇಲ್ಲ. ಹಿಂದಿದ್ದವರನ್ನು ನೋಡುವುದೂ ಇಲ್ಲ. ಈ ತತ್ವದಲ್ಲೇ ಸಾಧು ಸಂತರು. ಮಹರ್ಷಿಗಳು ಎಲ್ಲಕ್ಕಿಂತ ಮಿಗಿಲಾಗಿ ದೇವರು ನಡೆಯುವ ದಾರಿ. ಮಕರ ರಾಶಿಯ ಶನಿ ನಿಮಗೆ ಏನೂ ತೊಂದರೆ ನೀಡದೆ ಶುಭಕೃತು ನಾಮ ಸಂವತ್ಸರದ ಜನವರಿಯಲ್ಲಿ ಮುಂದೆ ಸಾಗಿ. ದ್ವಿತೀಯದಲ್ಲಿ ಗುರು ಸಂಚಾರವಿರುವುದರಿಂದ ಶೇ.50% ಶುಭಾಂಶ ನಡೆದು ನಿಮ್ಮನ್ನು ಸಂತೋಷಪಡಿಸುತ್ತಾನೆ. ದಶರಥ ವಿರಚಿತ ಶನಿಸ್ತೋತ್ರ ಪಠಿಸಿ. ಕುಂಭ- ಮೀನರಾಶಿಯ ಗುರುಸಂಚಾರ ದೇಶದ ವಾತಾವರಣದಲ್ಲಿ ಬದಲಾವಣೆ ನೀಡಿ ಮಾನವರಿಗೂ ಮಳೆ ಹಾಗೂ ಬಿಸಿಲಿನ ವೈಪರೀತ್ಯದಿಂದ ಸಂಕಷ್ಟ ಉಂಟಾಗಬಹುದು. ಆದ್ದರಿಂದ ಗುರುಚರಿತ್ರೆಯ 48ನೇ ಅಧ್ಯಾಯ ಓದಿ. ಕಷ್ಟ-ನಷ್ಟ, ಧನ ಕೊರತೆಯನ್ನು ದೇವರೇ ನೀಗಿಸುತ್ತಾನೆ.

ಕುಂಭ

ಜನ್ಮರಾಶಿಯಲ್ಲಿ ಗುರುವಿರುವುದರಿಂದ ನಿಮಗೆ ಯಾವ ವಿಚಾರದಲ್ಲೂ ಕಡಿಮೆ ಮಾಡುವುದಿಲ್ಲ. 12ನೇ ಮನೆ ಶನಿ ಪರಿಪೂರ್ಣವಾದ ಫಲವಿಲ್ಲದಿದ್ದರೂ ಜೀವನದಲ್ಲಿ ಸಂಕಷ್ಟ, ವೈಪರೀತ್ಯ. ಮನುಷ್ಯನಿಗೆ ದೈವತ್ವವಿದ್ದರೆ ಧರ್ಮ- ದೇವರೇ ಕೈ ಹಿಡಿದು ನಡೆಸುತ್ತಾನೆ. ವ್ಯವಸಾಯ ಮಾಡುವವರು ನಿಮ್ಮ ಊರಿನ ಗುರುಗಳನ್ನು ಸಂರ್ಪಸಿ ನಿರ್ಧಾರ ಮಾಡಿ. ಶೀತಗಾಳಿಯೂ ವರ್ಷಧಾರೆಯೂ ಜಾಸ್ತಿಯಾಗಿ ಬೆಳೆಯು ತುಟ್ಟಿಯಾಗಬಹುದು. ಆರೋಗ್ಯಕ್ಕಾಗಿ ನಿತ್ಯವೂ ಧನ್ವಂತರಿ ಜಪಮಾಡಿ. ಸುಬ್ರಹ್ಮಣ್ಯ ಸಹಸ್ರನಾಮ ಜಪಮಾಡಿ. ಶರೀರ ಸುಖಕ್ಕೆ ಯಾವ ಕೊರತೆಯೂ ಇಲ್ಲ. ಆತ್ಮನಿಗೆ ದೇಹವೇ ದೇವಾಲಯ. ಆ ದೇವರನ್ನು ಸ್ವಚ್ಛವಾಗಿಟ್ಟು ರೋಗಬರದಂತೆ ಕಾಪಾಡುವುದು ನಿಮ್ಮ ಮುಖ್ಯ ಕರ್ತವ್ಯ. ಅದಕ್ಕಾಗಿ ಗುರುಚರಿತ್ರೆಯ 11ನೇ ಅಧ್ಯಾಯವನ್ನು ಪಾರಾಯಣ ಮಾಡಿ. ಸಂತೋಷವನ್ನು ಕಾಪಾಡಿಕೊಳ್ಳಿ.

ಮೀನ

ಹನ್ನೊಂದನೇ ಮನೆಯ ಶನಿಯಿಂದ ಜಯದ ಹಾದಿಯಲ್ಲಿ ಇದ್ದೀರ. ದೇವರು ಕೊಟ್ಟ ಜೀವನವು ಮೈಮೇಲೆ ಹಾಕಿಕೊಳ್ಳುವ ಬಂಗಾರಕ್ಕಿಂತ ಮಿಗಿಲಾದದ್ದು. ಮೀನರಾಶಿಯಲ್ಲಿ ಜನಿಸಿದವರು ಸಂಶಯ, ಅನಿಶ್ಚಿತತೆಯಿಂದ ಕೂಡಿದ ಜೀವನ ಮಾಡಬಾರದು. ಯಾರಿಂದ ಯಾರಿಗೂ ಏನೂ ಬೇಕಾಗುವುದೂ ಇಲ್ಲ. ಸೃಷ್ಟಿಕರ್ತನೊಬ್ಬನೇ ಸಂರಕ್ಷಿಸುವವನು. 12ರಲ್ಲಿ ಶನಿ ಬಂದು ಗುರುವು ಸ್ವಕ್ಷೇತ್ರಕ್ಕೆ ಬರುತ್ತಾನೆ. ಆ ಕಾಲದಲ್ಲಿ ಎಚ್ಚರಿಕೆಯಿಂದ ಮುನ್ನಡೆಯಿರಿ. ಶನಿಯ ಏಳೂವರೆ ವರ್ಷದ ಸಂಚಾರವು ಆರಂಭವಾದ ಕೂಡಲೇ ಕೆಲವೊಂದು ವ್ಯತ್ಯಯ, ವ್ಯಾಪಾರದಲ್ಲಿ ನಷ್ಟ, ದೇಹಾಲಸ್ಯ ಉಂಟಾಗಿ ಕೆಲವೊಂದು ಘಟನೆಗಳು ಸಂಭವಿಸಬಹುದು. ದೇವರು-ಧರ್ಮವನ್ನು ನಂಬಿದವನಿಗೆ ಯಾವ ತೊಂದರೆಯಿಲ್ಲ. ಅದಕ್ಕೆ ಸಾಕ್ಷಿ ಧಮ ಕಷ್ಟಕಾಲ ಕಳೆದು ಮತ್ತೆ ರಾಜ್ಯವನ್ನು ಪಡೆದ ಉದಾಹರಣೆಯಿದೆ. ರಾಮನು ಕಾಡಿನಲ್ಲಿದ್ದರೂ ಇಂದೂ ಮಹಾ ಕೀರ್ತಿವಂತನಾಗಿದ್ದಾನೆ. ರಾಮಾಯಣದ ಒಂದು ಭಾಗವಾದ ರಾಮಗೀತೆಯನ್ನು ಪಾರಾಯಣ ಮಾಡಿ. ಗುರುಚರಿತ್ರೆಯ ಒಂದು ಅಧ್ಯಾಯ ನಿತ್ಯ ಪಾರಾಯಣ ಮಾಡಿ. ಬಂದ ಕಷ್ಟ-ನಷ್ಟಗಳು ದೂರವಾಗುತ್ತದೆ. ಅಗಿಂದಾಗ್ಗೆ ಶರೀರ ಬಾಧೆಗೆ ವೈದ್ಯರನ್ನು ಸಂರ್ಪಸಿ. ಕುಲದೇವರನ್ನು ಪೂಜಿಸಿ.

ದೈವ ಸನ್ನಿಧಿಯಲ್ಲೇ ಪರಿಹಾರ

ಪ್ಲವನಾಮ ಸಂವತ್ಸರದ ಅಂತ್ಯಭಾಗ ಪ್ರಾರಂಭವಾಗಿ ಜನವರಿ 15ರಂದು ಸೂರ್ಯನು ಮಕರ ರಾಶಿಯನ್ನು ಸೇರಲಿದ್ದಾನೆ. ಅದು ಶನಿ ಮನೆಯಾಗಿ, ಶನಿ ಮಕರದಲ್ಲೇ ಇರುವುದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡವೂ, ಗೊಂದಲಗಳೂ ಉಂಟಾಗಿ ನಿಭಾಯಿಸುವುದು ಕಷ್ಟಸಾಧ್ಯವಾಗುತ್ತದೆ. ಸೂರ್ಯನೂ ಶನಿಯೂ ಒಂದೇ ಮನೆಯಲ್ಲಿರುವಾಗ ಮಂತ್ರಿ ಮಂಡಲಕ್ಕೆ ಆತಂಕಗಳೂ ಇವೆ. ರಾಜಕಾರಣಕ್ಕಿಂತ ಮಿಗಿಲಾಗಿ ದೊರೆಗಳು ಒಮಿಕ್ರಾನ್​ನಿಂದ ನರಳುತ್ತಿರುವ ಜನರ ರಕ್ಷಣೆಗೆ ಧಾವಿಸಬೇಕು. ಗುರು ಶನಿ ಸಂಚಾರ, ರಾಹು ಕೇತುಗಳ ಸಂಬಂಧಿತ ಸ್ಥಾನಮಾನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಏರುಪೇರುಗಳಾಗುತ್ತವೆ. ಆಡಳಿತ ಪಕ್ಷವು ರಾಜ್ಯಗಳನ್ನು ಗೆಲ್ಲಬೇಕಾದರೆ ಸಾಹಸವನ್ನೇ ಮಾಡಬೇಕಾದೀತು. ಪ್ರಧಾನಿಯವರು ಕಾಶಿಯಲ್ಲಿ ಎಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟು ಸರಿಯಾಗುವ ಸಾಧ್ಯತೆ ಕಡಿಮೆಯಿದ್ದು, ಹೊಸ ಉದ್ಯೋಗ, ವ್ಯಾಪಾರ, ಆಹಾರ ಸಮಸ್ಯೆ ಕ್ಷೋಭೆಗೆ ಕಾರಣವಾಗುತ್ತದೆ. 2024ರ ಚುನಾವಣೆ ಗೆಲ್ಲುವುದು ಅಷ್ಟೇ ಕಷ್ಟವಾಗುತ್ತದೆ. ಆಡಿದ ಮಾತನ್ನು ನೆರವೇರಿಸಿ ಪ್ರಜೆಗಳ ಮುಂದೆ ಬಂದು ನಿಂತರೆ ಶ್ರಮದಿಂದ ಗೆಲುವು ಸಿಗಬಹುದು. ಏಪ್ರಿಲ್ 2022ರಲ್ಲಿ ಏಳು ಗ್ರಹಗಳು ಒಮ್ಮೆಲೇ ಸಾಗಿ, ಭಾರತದ ಎಲ್ಲ ರಾಜ್ಯಗಳಲ್ಲೂ ಅಶಾಂತಿ ತಲೆದೋರುತ್ತದೆ. ಇದರ ಪರಿಹಾರಕ್ಕೆ ಏಕೈಕ ದಾರಿ, ಪ್ರಧಾನಿಯವರು ದೈವಕ್ಕೆ ಮೊರೆ ಹೋಗಬೇಕು. ಗಾಣಗಾಪುರದಲ್ಲಿ ಪ್ರಾರ್ಥಿಸಿದಲ್ಲಿ, ತ್ರಿಮೂರ್ತಿಗಳೇ ಶಿವಭಕ್ತನಾದ ಮೋದಿಯವರ ಕೈಹಿಡಿದು ನಡೆಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net