ರಾಜರಾಜೇಶ್ವರಿಯಲ್ಲಿ ಬಿಜೆಪಿ ಇಬ್ಬಗೆ ನೀತಿ: ಮುನಿರತ್ನ ಪರ ನಿಲುವು, ಮುನಿರಾಜುಗೌಡ ಪರ ಒಲವು; 2023ರ ಕುರುಕ್ಷೇತ್ರ

RR Nagar
Published on

| ವಿಲಾಸ ಮೇಲಗಿರಿ ಬೆಂಗಳೂರು

2020ರ ಉಪ ಚುನಾವಣೆಯಲ್ಲಿ ಅಪಾರ್ಟ್​ವೆುಂಟ್​ವೊಂದರಲ್ಲಿ ರಾಶಿ ರಾಶಿ ಮತದಾರರ ಗುರುತಿನ ಚೀಟಿ ಸಿಕ್ಕು ರಾಜ್ಯವಷ್ಟೇ ಅಲ್ಲ, ಇಡೀ ದೇಶದ ಗಮನ ಸೆಳೆದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಈಗ ಮತ್ತೆ ಚುನಾವಣೆ ರಂಗೇರಿದೆ. ಕಾಂಗ್ರೆಸ್​ನಿಂದ ಪಕ್ಷಾಂತರ ಮಾಡಿ, 2020ರ ಉಪ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಮುನಿರತ್ನ ಈ ಕ್ಷೇತ್ರದ ಶಾಸಕ. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದಾರೆ.

ಕಾಂಗ್ರೆಸ್​ನಿಂದ ಎರಡು ಬಾರಿ ಶಾಸಕರಾಗಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಮುನಿರತ್ನ 17 ಶಾಸಕರ ಗುಂಪಿನಲ್ಲಿ ಪಕ್ಷಾಂತರ ಮಾಡಿ ಬಿಜೆಪಿ ಪಾಳೆಯ ಸೇರಿದ್ದರು. ಬಿಜೆಪಿಯಿಂದಲೂ ಸ್ಪರ್ಧಿಸಿ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣ್ಣುಮುಕ್ಕಿಸಿದ್ದರು. ಆದರೆ ಈ ಬಾರಿ ಮುನಿರತ್ನಗೆ ಗೆಲುವು ಅಂದಷ್ಟು ಸುಲಭವಲ್ಲ ಎಂಬ ಮಾತೂ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕುಸುಮಾ ಹನುಮಂತರಾಯಪ್ಪ ಈಗ ಮತ್ತೆ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಚಟುವಟಿಕೆಯಿಂದ ಇದ್ದಾರೆ. ಈ ಹಿಂದೆ ಬಿಜೆಪಿಯಿಂದ ಸಿಡಿದೆದ್ದಿದ್ದ ತುಳಸಿ ಮುನಿರಾಜುಗೌಡ ಈ ಬಾರಿ ಮತ್ತೆ ಟಿಕೆಟ್ ಬಯಸಿದರೂ ಆಶ್ಚರ್ಯವಿಲ್ಲ. ಅತ್ತ ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಜೆಡಿಎಸ್ ಕೂಡ ಇದನ್ನು ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಗಣಿಸಿದೆ. ಕಾರಣ ಜೆಡಿಎಸ್​ನಿಂದ ಗಿರೀಶ್ ಹಾಗೂ ಕಳೆದ ಬಾರಿ ಠೇವಣಿ ಕಳೆದುಕೊಂಡ ವಿ. ಕೃಷ್ಣಮೂರ್ತಿ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಕೃಷ್ಣಮೂರ್ತಿ ಠೇವಣಿ ಕಳೆದುಕೊಂಡಿರುವುದರಿಂದ ಜೆಡಿಎಸ್ ಹೊಸ ಮುಖಕ್ಕೆ ಮಣೆ ಹಾಕಿದರೂ ಅಚ್ಚರಿ ಇಲ್ಲ.

ಮುನಿರತ್ನ ಈಗ ‘ಮಣಿರತ್ನ’: ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿನಗರ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೊಂಡು ಹೊಸ ಕ್ಷೇತ್ರವಾಯಿತು. 2008ರ ಬಳಿಕ ನಡೆದ 4 ಚುನಾವಣೆ(ಉಪ ಚುನಾವಣೆ ಸೇರಿ)ಯಲ್ಲಿ ಮೂರು ಚುನಾವಣೆಗಳಲ್ಲಿ ಮುನಿರತ್ನ ಗೆಲುವು ಸಾಧಿಸಿ ‘ಮಣಿರತ್ನ’ವಾಗಿದ್ದಾರೆ.
ಕ್ಷೇತ್ರ ವ್ಯಾಪ್ತಿ: ಈ ಕ್ಷೇತ್ರದಲ್ಲಿ ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ.ಪಿ. ಪಾರ್ಕ್, ಯಶವಂತಪುರ, ಎಚ್.ಎಂ.ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ ಸೇರಿ 9 ವಾರ್ಡ್​ಗಳನ್ನು ಒಳಗೊಂಡಿದೆ.

ಜೆಡಿಎಸ್​ಗೆ ಹಿನ್ನಡೆ: ಹಿಂದೆಲ್ಲ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದ ಜೆಡಿಎಸ್ 2020ರ ಉಪಚುನಾವಣೆ ಬಳಿಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ಬಂದು ತಲುಪಿದೆ. ಉಪ ಚುನಾವಣೆಯಲ್ಲಂತೂ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಠೇವಣಿ ಕೂಡ ಪಡೆಯಲಾಗಲಿಲ್ಲ!

ಕ್ಷೇತ್ರದ ಜಾತಿವಾರು ಮತದಾರರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,78,300 ಮತದಾರರು ಇದ್ದಾರೆ. ಈ ಪೈಕಿ ಒಕ್ಕಲಿಗ ಸುಮಾರು 1,50,000, ಲಿಂಗಾಯತ 30,000, ಬ್ರಾಹ್ಮಣ 40,000, ಎಸ್​ಸಿ-ಎಸ್​ಟಿ 1,00,000, ಮುಸ್ಲಿಂ 15,000, ಕುರುಬ 25,000, ದೇವಾಂಗ 5,000, ತಮಿಳು 20,000 ಹಾಗೂ ತೆಲುಗು ಭಾಷಿಕರು 55,000, ಬೇರೆ ಬೇರೆ ಸಮಯದಾಯದ 35,000 ಮತದಾರರಿದ್ದಾರೆ.

ಕಾಂಗ್ರೆಸ್ ಬಲವೃದ್ಧಿ: ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡರೂ ಎಚ್.ಕುಸುಮಾ ನಿರಂತರವಾಗಿ ಮತದಾರರ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಆಡಳಿತ ಪಕ್ಷದ ವೈಫಲ್ಯಗಳ ವಿರುದ್ಧ ಕ್ಷೇತ್ರದಲ್ಲಿ ದೊಡ್ಡ ಪ್ರತಿಭಟನೆ ನಡೆಸಿದ್ದಾರೆ. ಕೊಳೆಗೇರಿ, ವಲಸೆ ಕಾರ್ವಿುಕರ ಪ್ರದೇಶಗಳಲ್ಲಿ ಮಕ್ಕಳ ಶಿಕ್ಷಣ ಸೇರಿ ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳು, ವಲಸೆ ಕಾರ್ವಿುಕರ ಮನ ಗೆಲ್ಲುವ ಸಾಧ್ಯತೆಗಳಿವೆ. ಇದು ಈ ಚುನಾವಣೆಯಲ್ಲಿ ಮುನಿರತ್ನ ಗೆಲುವಿನ ದಾರಿಗೆ ಮುಳ್ಳಾಗುವ ಸಾಧ್ಯತೆಗಳಿವೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿಯದ್ದು ಇಬ್ಬಗೆಯ ನೀತಿ!: 2020ರಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ನಿಷ್ಠಾವಂತ ನಾಯಕ ಮುನಿರಾಜುಗೌಡ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಅಚ್ಚರಿಯ ರಾಜಕೀಯ ಬೆಳವಣಿಗೆ ಯೊಂದರಲ್ಲಿ ಮುನಿರತ್ನ ಬಿಜೆಪಿ ಸೇರ್ಪಡೆ ಗೊಂಡರು. ಹಾಗಾಗಿ ಮುನಿರಾಜುಗೌಡಗೆ ಟಿಕೆಟ್ ಕೈತಪ್ಪಿತು. ಬಳಿಕ ಮುನಿರಾಜುಗೌಡ ಅವರನ್ನು ಬಿಜೆಪಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡಿತು. ಆದರೂ ಅವರು ಮುನಿರತ್ನ ವಿರುದ್ಧ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಹಾಕಿರುವ ಮೊಕದ್ದಮೆ ಹಿಂಪಡೆದಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿ ಒಂದು ಕಡೆ ಮುನಿರಾಜುಗೌಡ ಹಾಗೂ ಇನ್ನೊಂದು ಕಡೆ ಮುನಿರತ್ನ ಪರ ವಕಾಲತ್ತು ವಹಿಸುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net