

1. ನಿಮಗೇನಾದರೊಂದು ಬೇಕೇ ಬೇಕು ಎನಿಸಿದಾಗ ಪ್ರಾರ್ಥಿಸುತ್ತೀರಿ. ನೀವು ಬಲಹೀನರು, ಯಾವುದೋ ಒಂದು ವಿಷಯವನ್ನು ನಿಭಾಯಿಸಲು ಸಾಧ್ಯವಿಲ್ಲವೆಂದಾಗ ಸಹಾಯಕ್ಕಾಗಿ ಯಾಚಿಸುತ್ತೀರಿ. ಅದೇ ಪ್ರಾರ್ಥನೆ.
2. ನಿಮ್ಮ ಯೋಗ್ಯತೆಗಿಂತಲೂ ಹೆಚ್ಚಾಗಿ ನೀವು ಪಡೆದಿರುವಿರಿ ಎಂದು ಅರಿತಾಗ ಮತ್ತು ಅದೊಂದು ಆಶೀರ್ವಾದವಾಗಿ, ಕೊಡುಗೆಯಾಗಿ ನಿಮ್ಮ ಬಳಿ ಬಂದಿದೆಯೆಂದು ಅರಿತಾಗ ನೀವು ವ್ಯಕ್ತಪಡಿಸುವ ಕೃತಜ್ಞತೆಯೇ ಪ್ರಾರ್ಥನೆ. ಇದನ್ನು ಇನ್ನೂ ಸ್ವಲ್ಪ ವಿಸ್ತಾರ ಮಾಡಿದರೆ, ಸೃಷ್ಟಿಕರ್ತನೊಡನೆ ಅಥವಾ ದೈವದೊಡನೆ ನೀವು ಆಳವಾದ ಪ್ರೀತಿಯಿಂದಿದ್ದರೆ, ಆಗ ನಿಮ್ಮಲ್ಲಿ ಪ್ರಾರ್ಥನೆ ಉಕ್ಕಿ ಬರುತ್ತದೆ. ನೀವು ರೂಪದ ಮೂಲಕ ದೈವವನ್ನು ಗ್ರಹಿಸಿದರೂ ಅಥವಾ ಅರೂಪದಲ್ಲಿ ಗ್ರಹಿಸಿದರೂ ಅದರ ಬಗ್ಗೆ ಕೃತಜ್ಞತೆ ಉಕ್ಕುತ್ತದೆ. ಆದ್ದರಿಂದ, ಪ್ರಾರ್ಥನೆಯೆಂದರೆ ಸ್ವಯಂ ಸ್ಪುರಿತವಾಗಿ ಆಗುವಂಥದ್ದು. ಅದೇ ಭಕ್ತಿ. ಪ್ರಾರ್ಥನೆಯೊಡನೆ ಕೆಲವು ಪೂಜಾ ವಿಧಿಗಳನ್ನು ನಡೆಸುವುದರಿಂದ ಜೀವನವು ವರ್ಣರಂಜಿತವಾಗಿ ಆಗುತ್ತದೆ. ದೀಪವನ್ನು ಬೆಳಗಿಸಿ, ಆರತಿಯನ್ನೆತ್ತಿದಾಗ ನಿಮ್ಮೊಳಗೆ ಮಲಗಿರುವ ಆ ಭಾವನೆಗಳು ಮೇಲೆದ್ದು ಬರುತ್ತವೆ.
ಪ್ರಾರ್ಥನೆಯ ಲಾಭಗಳೆಂದರೆ: 1. ನಿಮ್ಮೊಳಗೆ ಮಲಗಿರುವ ಭಾವನೆಗಳನ್ನು ಎಬ್ಬಿಸುತ್ತದೆ. 2. ನಿಮ್ಮ ತಲೆಯ ಮೇಲಿನ ಹೊರೆಯನ್ನು ನಿಮ್ಮಲ್ಲಿರುವ ಚಿಂತೆಯನ್ನು ತೊಡೆದು ಹಾಕುತ್ತದೆ.
3. ನಿಮಲ್ಲಿ ವಿಶ್ವಾಸವನ್ನು ಬೆಳೆಸುತ್ತದೆ ಮತ್ತು ನಿಮ್ಮ ಕಡೆಯಿಂದ ಸಂಪರ್ಕವನ್ನು ಅನುಭವಿಸುತ್ತೀರಿ. ನೀವಾಗಲೇ ದೈವದೊಡನೆ ಸಂಪರ್ಕದಲ್ಲಿ ಇದ್ದೀರಿ, ಆದರೆ ಉನ್ನತ ಶಕ್ತಿಯೊಡನೆ ಸಂಬಂಧಪಟ್ಟಿದ್ದೀರಿ ಎಂಬ ಅರಿವು ಮೂಡಲಾರಂಭಿಸುತ್ತದೆ.
4.ಒಂದು ದಿನಚರಿಯನ್ನು ಅದು ಸೃಷ್ಟಿಸುತ್ತದೆ. ನೀವು ಪ್ರತಿನಿತ್ಯ
ಪ್ರಾರ್ಥಿಸುವ ಅಭ್ಯಾಸವನ್ನು ಮಾಡಿಕೊಂಡರೆ, ಮೊದಲನೆಯ ನಾಲ್ಕು ದಿನಗಳಲ್ಲಿ ನಿಮಗೆ ಯಾವ ಅನುಭವವೂ ಆಗದಿರ ಬಹುದು. ಆದರೆ ಐದನೆಯ ದಿನದಂದು ಏನೋ ಒಂದರ ಅನುಭವವಾಗುತ್ತದೆ. ಇತರ ಯಾವುದೇ ಸಾಧನೆಯಂತೆ ಇದು. ಆದ್ದರಿಂದ ನಿಮ್ಮ ಜೀವನದಲ್ಲಿ ಪ್ರಾರ್ಥನೆಯನ್ನು ಒಂದು ಅಭ್ಯಾಸವಾಗಿ ಮಾಡಿಕೊಳ್ಳಿ. ಇದರಿಂದ ದಿವ್ಯವಾದ ಒಂದು ಕಾರ್ಯವನ್ನು ಮಾಡುವ ಅವಕಾಶ ನಿಮಗೆ ಸಿಗುತ್ತದೆ. ಸ್ಪರ್ಶವೇದ್ಯವಾಗಿರದ, ಆದರೂ ಇರುವ ಅಸ್ತಿತ್ವದೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳುವ ರೀತಿಯೇ ಪ್ರಾರ್ಥನೆ. ಅಜ್ಞಾತವಾದ, ಅಗೋಚರವಾದ ಅಸ್ತಿತ್ವದೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳುವ ರೀತಿಯೇ ಪ್ರಾರ್ಥನೆ. ಅಜ್ಞಾತವಾದುದರೊಡನೆ ಪ್ರೇಮದಲ್ಲಿ ಬೀಳುವುದೇ ವಿಶ್ವಾಸ.
ಒಂದೊಂದು ದಿನ ಒಂದೊಂದು ದೇವತೆಗೆ ಸಂಬಂಧಪಟ್ಟಿದೆ, ಒಂದೊಂದು ಗ್ರಹಕ್ಕೆ ಸಂಬಂಧಪಟ್ಟಿದೆ, ಆ ದಿನ ಆ ದೇವತೆಗೇ ಪ್ರಾರ್ಥಿಸಬೇಕು ಎಂಬುದರ ಬಗ್ಗೆ ಬಹಳ ಚಿಂತಿಸಲು ಹೋಗಬೇಡಿ. ಶಿವರಾತ್ರಿ ಕೇವಲ ಸೋಮವಾರವೇ ಬರುವುದಿಲ್ಲ, ವಾರದ ಯಾವ ದಿನದಲ್ಲಾದರೂ ಬರಬಹುದು. ಯಾವ ದಿನ ಶಿವರಾತ್ರಿ ಬರುತ್ತದೊ ಅಂದೇ ಶಿವನ ದಿನ. ಭಗವಾನ್ ಶಿವನ ನಿಯಂತ್ರಣದಲ್ಲಿ ಕೆಲವು ಗ್ರಹಗಳು ಮತ್ತು ನಕ್ಷತ್ರಗಳಿರುವುದರಿಂದ ಸೋಮವಾರ ಶಿವನಿಗೆ ಎಂದರಷ್ಟೆ-ಕೇವಲ ದಿನಗಳಲ್ಲ, ನಕ್ಷತ್ರಗಳೂ ನಿರ್ದಿಷ್ಟ ದೇವತೆಗಳ ನಿಯಂತ್ರಣದಲ್ಲಿವೆ. ಪ್ರಾರ್ಥಿಸಬೇಕೆಂದರೆ ಪರಮಾತ್ಮನಿಗೆ ಪ್ರಾರ್ಥಿಸಿ, ಎಲ್ಲಾ ದೇವತೆಗಳೂ ಪರಮಾತ್ಮನಲ್ಲಿದ್ದಾರೆ.
ಆದ್ದರಿಂದಲೇ ಇಷ್ಟ ದೇವತೆ ಎಂದರು. ಕುಟುಂಬಗಳಿಗೆ ಕುಲದೇವತೆ, ಇಡೀ ಹಳ್ಳಿಗೆ ಗ್ರಾಮದೇವತೆ, ಒಂದು ನಿರ್ದಿಷ್ಟವಾದ ಸ್ಥಳಕ್ಕೆ ಕ್ಷೇತ್ರ ಪಾಲಕ ಎಂದರು. ಈ ಎಲ್ಲಾ ನಿಯಮಗಳೂ ಅದ್ಭುತವಾಗಿವೆ. ಮೂರು ಹಂತಗಳ ಪ್ರಾರ್ಥನೆಗಳಿವೆ :
1. ಆಧ್ಯಾತ್ಮಿಕ :- ಇಲ್ಲಿ ಆತ್ಮದ ಜ್ಞಾನವಿದೆ. ಆಧ್ಯಾತ್ಮಿಕ ಪದ್ಧತಿಗಳಿವೆ.
2. ಅಧಿಭೌತಿಕ ಹಂತದಲ್ಲಿ ಪ್ರಾರ್ಥನೆ.
3. ಅಧಿದೈವಿಕದ ಹಂತ. ಆಧ್ಯಾತ್ಮಿಕ, ಆಧಿಭೌತಿಕ ಮತ್ತು ಆಧಿದೈ ವೀಕದ ಹಂತಕ್ಕಾಗಿ 3 ಸಲ ಶಾಂತಿ, ಶಾಂತಿ, ಶಾಂತಿ ಎನ್ನುತ್ತೇವೆ.
ಭಗವಂತನಿಗಾಗಿ ನಾವು ಉಪವಾಸ ಮಾಡುತ್ತಿಲ್ಲ ಎಂಬ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶುಕ್ರವಾರ ಪ್ರಾರ್ಥಿಸಿದರೆ ದೇವಿಗೆ ಸಂತೋಷವಾಗುತ್ತದೆ, ಸೋಮವಾರ ಉಪವಾಸ ಮಾಡಿದರೆ ಶಿವನಿಗೆ ಸಂತೋಷವಾಗುತ್ತದೆ ಎನ್ನುವಂತದ್ದಿಲ್ಲ ! ಶಿವನನ್ನು ಮೆಚ್ಚಿಸುವ ಸಲುವಾಗಿ ಸೋಮವಾರ ಉಪವಾಸ ಮಾಡುವುದಲ್ಲ. ನಿಮಗಾಗಿ, ನಿಮ್ಮ ಆರೋಗ್ಯಕ್ಕಾಗಿ, ನಿಮ್ಮ ದೇಹದ ಶುದ್ಧಿಗಾಗಿ ಉಪವಾಸ ಮಾಡುತ್ತಿರುವಿರಷ್ಟೆ.
ನೀವು ಸದ್ದುದ್ದೇಶವನ್ನು ಹೊಂದಿದ್ದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೆ, ಎಲ್ಲಾ ಕಾಲವೂ ಒಳ್ಳೆಯ ಕಾಲವೇ ಆಗಿರುತ್ತದೆ. ಕೆಲವು ಸಮಯ ಇತರ ಸಮಯಗಳಿಗಿಂತಲೂ ಹೆಚ್ಚು ಸವಾಲನ್ನು ಒಡ್ಡುತ್ತದೆಯಾದರೂ, ನಿಮ್ಮ ನಿಜ ಸ್ನೇಹಿತರು ಯಾರೆಂದು ಅದು ತೋರಿಸುತ್ತದೆ. ಯಾರ ಹೃದಯದಲ್ಲಿ ಹರಿಯಿದ್ದಾನೊ ಅವರಿಗೆ ಎಲ್ಲಾ ಕಾಲವೂ ಒಳ್ಳೆಯ ಕಾಲವೆ. ಇಂದು ದೈವ ನಾಮಸ್ಮರಣೆ ಮಾಡಿದರೆ ಇಂದಿನ ದಿನ ಅತ್ಯುತ್ತಮವಾದ ದಿನ. ದೈವವನ್ನು ನೆನೆಸಿಕೊಳ್ಳಲು ಈ ಕ್ಷಣವೇ ಸತ್ಕಾಲ.