'ತಲೆಮರೆಸಿಕೊಳ್ಳುವ ಯಾವ ಕೆಲಸವನ್ನೂ ನನ್ನ ತಮ್ಮ ಮಾಡಿಲ್ಲ': ಸಂಸದ ಪ್ರತಾಪ್ ಸಿಂಹ

ವಿಜಯವಾಣಿ - 2023-12-31T200435.173
Published on

ಮೈಸೂರು: ಹಾಸನ ಜಿಲ್ಲೆಯ ಬೇಲೂರು ತಾಲೂಕು ನಂದಗೋಡನ ಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 126ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿದು, ಸಾಗಾಟ ಮಾಡಿದ ಆರೋಪದ ಮೇಲೆ ಬಂಧನವಾಗಿದ್ದ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಅವರ ಸಹೋದರ ವಿಕ್ರಮ್​ ಸಿಂಹಗೆ ಇಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಈ ಕುರಿತಂತೆ ಕಡೆಗೂ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ತಮ್ಮ ಎಕ್ಸ್​ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

ಸುಮಾರು 126 ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಆರೋಪದಡಿ ವಿಕ್ರಮ್​ ಸಿಂಹ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ತಿಂಗಳ ಆರಂಭದಲ್ಲಿ ವಿಕ್ರಮ್ ಸಿಂಹ ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳಿಗೆ ವಿಸಿಟರ್​ ಪಾಸ್‌ಗಳನ್ನು ನೀಡಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದರು. ಇದೀಗ ಮರ ಕಳ್ಳಸಾಗಾಣೆ ಪ್ರಕರಣದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇಂದು ಮರಗಳ್ಳತನ ಪ್ರಕರಣದಲ್ಲಿ ಜಾಮೀನು ಮಂಜೂರಾದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿದ ವಿಕ್ರಂ ಸಿಂಹ, "ನಾನು ಯಾವುದೇ ತಪ್ಪು ಮಾಡಿಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ. ನನಗೆ ನ್ಯಾಯ ಸಿಗಲು ನೀವೆಲ್ಲರೂ ಬೆಂಬಲಿಸಿದ್ದೀರಿ ಧನ್ಯವಾದ. ಕೇವಲ ಬೆಳೆ ಬೆಳೆಯುವ ಉದ್ದೇಶದಿಂದ ಹೋದವನಿಗೆ ಈ ತರಹದ ಆರೋಪಗಳನ್ನು ಕೇಳುವಂತಾಯಿತು. ಇದೆಲ್ಲಾ ರಾಜಕೀಯ ಪಿತೂರಿ" ಎಂದು ಹೇಳಿದರು.

ಇನ್ನು ಈ ಬಗ್ಗೆ ಟ್ವೀಟ್​ ಮಾಡಿದ ಸಂಸದ ಪ್ರತಾಪ್ ಸಿಂಹ, "ತಲೆಮರೆಸಿಕೊಳ್ಳುವ ಯಾವ ಕೆಲಸವನ್ನೂ ನನ್ನ ತಮ್ಮ ಮಾಡಿಲ್ಲ. ತಲೆಮರೆಸಿಕೊಳ್ಳುವವರು ತಮ್ಮದೇ ಕಾರಿನಲ್ಲಿ ಫೋನ್ ಆನ್ ಮಾಡಿಕೊಂಡು ಬೆಂಗಳೂರಿಗೆ ಹೋಗುವುದಿಲ್ಲ. ಗೌರವಾನ್ವಿತ ನ್ಯಾಯಾಧೀಶರಿಗೆ ಧನ್ಯವಾದಗಳು. ಕರೆ, ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಮೂಲಕ ಬೆನ್ನಿಗೆ ನಿಂತ ನಿಮ್ಮೆಲ್ಲರಿಗೂ ಮತ್ತು ಮಾಧ್ಯಮ ಮಿತ್ರರಿಗೂ ಧನ್ಯವಾದಗಳು" ಎಂದು ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net