ಉದ್ದೇಶಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದೆ ಎನ್ನುತ್ತಲೇ ವಿರೋಧಿಗಳಿಗೆ ಸವಾಲೆಸೆದ ಪ್ರತಾಪ್ ಸಿಂಹ

Prathap Simha
Published on

ಮೈಸೂರು: ನಾನು ಉದ್ಧೇಶ ಪೂರ್ವಕವಾಗಿಯೇ ಒಡೆಯರ್ ಎಕ್ಸ್​ಪ್ರೆಸ್​ ಎಂದು ರೈಲಿನ ಹೆಸರು ಬದಲಾಯಿಸಿದ್ದೇನೆ. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಮಹಾರಾಜರು ಮೈಸೂರಿಗೆ ಕೊಟ್ಟ ಕೊಡುಗೆಗಳನ್ನು ನಾನು ಹೇಳುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸದ್ದಾರೆ.

ಟಿಪ್ಪುವಿಗೂ ಮೈಸೂರಿಗೂ ಸಂಬಂಧವಿಲ್ಲ. ಟಿಪ್ಪು ಶ್ರೀರಂಗಪಟ್ಟಣದವನು. ಟಿಪ್ಪು ಸುಲ್ತಾನ್ ಬೆಂಬಲಿಗರು, ಅವನು ಮೈಸೂರಿಗೆ ನೀಡಿದ ಮೂರು ಕೊಡುಗೆಗಳನ್ನು ಹೇಳಲಿ ಎಂದು ಪ್ರತಾಪ್ ಸಿಂಹ ಸವಾಲೆಸೆದರು.

ಒಂದು ಬಾರಿ ರೈಲಿಗೆ ಇಟ್ಟ ಹೆಸರನ್ನು ಬದಲಾಯಿಸಿದ ಉದಾಹರಣೆಗಳೇ ಇಲ್ಲಾ. ಆದರೆ ನಾನು ಉದ್ಧೇಶಪೂರ್ವಕವಾಗಿಯೇ ಪ್ರಯತ್ನ ಪಟ್ಟು ಒಡೆಯರ್ ಎಕ್ಸ್​ಪ್ರೆಸ್ ಎಂದು ಹೆಸರು ಬದಲಾಯಿಸಿದ್ದೇನೆ. ನಾನು ಮೈಸೂರಿಗೆ ಹತ್ತು ರೈಲು ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನ ನಾನು ಮಾಡಿದ್ದೇನೆ ಎಂದು ಹೇಳಿದರು.

ಟಿಪ್ಪು ಸುಲ್ತಾನನ ಹೆಸರನ್ನು ಜನರ ಮನಸ್ಸಿನಿಂದ ತೆಗೆಯಲು ಆಗಲ್ಲಾ ಎನ್ನುವವರ ಹೆಸರನ್ನೇ ಜನ ಮರೆಯುತ್ತಿದ್ದಾರೆ. ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾನಿಲಯ ಮೈಸೂರು ಮಹಾರಾಜರು ಕಟ್ಟಿಸಿದ್ದು. ಸಿದ್ದರಾಮಯ್ಯ ಮಹಾರಾಜರ ಬಗ್ಗೆ ಉಢಾಫೆಯಿಂದ ಮಾತನಾಡುತ್ತಾರೆ‌. ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದರು.

ಟಿಪ್ಪು ಸುಲ್ತಾನ ಒಬ್ಬ ಕನ್ನಡ ವಿರೋಧಿ. ಕನ್ನಡಿಗರ ಮೇಲೆ ಪರ್ಶಿಯನ್ ಭಾಷೆ ಹೇರುವ ಕೆಲಸ ಮಾಡಿದ್ದಾನೆ. ದಿವಾನ್ ಪದ ಪರ್ಶಿಯನ್ ಪದ. ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳು ಪರ್ಶಿಯನ್ ಭಾಷೆಗೆ ಸೇರಿದ್ದಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net