

ಬೆಂಗಳೂರು: ಸದ್ಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್' ಬಿಡುಗಡೆ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್, ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚು ಚಿಂತನೆ ನಡೆಸಿಲ್ಲ ಎಂದು ಹಲವರು ಊಹಿಸಿದ್ದಾರೆ. ಆದ್ರೆ, ಸ್ಟಾರ್ ಡೈರೆಕ್ಟರ್ ಕೈಯಲ್ಲಿರುವ ಮುಂದಿನ ಚಿತ್ರಗಳಲ್ಲಿ ಖ್ಯಾತ ನಟರು ಅಭಿನಯಿಸಲಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಈ ಮಧ್ಯೆ ಟಾಲಿವುಡ್ ನಟ ಜೂ. ಎನ್‌ಟಿಆರ್ ಅವರ 'ಎನ್‌ಟಿಆರ್ 31' ಚಿತ್ರವನ್ನು ನಿರ್ದೇಶಿಸಲಿರುವ ಪ್ರಶಾಂತ್, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಚಿತ್ರದ ಕುರಿತಂತೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ಸಲಾರ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಿರ್ದೇಶಕ ಪ್ರಶಾಂತ್ ನೀಲ್, ತಾತ್ಕಾಲಿಕವಾಗಿ 'NTR31' ಎಂದು ಹೆಸರಿಡಲಾದ ಚಿತ್ರದ ಕುರಿತು ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ಬಹಿರಂಪಡಿಸಿದ್ದಾರೆ. ಈ ಚಿತ್ರವು 2024ರ ಮಧ್ಯಂತರದಲ್ಲಿ ಪ್ರಾರಂಭವಾಗಲಿದೆ ಎಂದ ಪ್ರಶಾಂತ್ ನೀಲ್, ಸದ್ಯದ ಮಟ್ಟಿಗೆ NTR31 ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
"ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸದ್ಯ ಎನ್‌ಟಿಆರ್ ಮತ್ತೊಂದು ಚಿತ್ರ ಮತ್ತು ಹಿಂದಿ ಪ್ರಾಜೆಕ್ಟ್‌ನಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಈ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಈಗ ನನ್ನ ಮೊದಲ ಆದ್ಯತೆ ಸಲಾರ್ ಬಿಡುಗಡೆ ಮಾಡುವುದು, ತದನಂತರ ಒಂದು ವಿರಾಮ ಪಡೆದು ಮುಂದುವರಿಸುವುದು" ಎಂದು ಪ್ರಶಾಂತ್ ಹೇಳಿದ್ದಾರೆ.
ಕಳೆದ ವರ್ಷ 'ಕೆಜಿಎಫ್' ನಿರ್ದೇಶಕರು ಜೂ. ಎನ್‌ಟಿಆರ್ ಅವರ 'NTR31' ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಚಿತ್ರಪ್ರೇಮಿಗಳು ಹಾಗೂ ಎನ್‌ಟಿಆರ್ ಫ್ಯಾನ್ಸ್ ಭಾರೀ ಸಂತಸವನ್ನು ವ್ಯಕ್ತಪಡಿಸಿದ್ದರು. ಇದೀಗ ಚಿತ್ರದ ಬಗ್ಗೆ ನಿರ್ದೇಶಕರು ಸುಳಿವು ಕೊಟ್ಟಿದ್ದು, 'ಸಲಾರ್' ನಂತರ ಕೊಂಚ ಬ್ರೇಕ್ ಪಡೆದು ಉಳಿದ ಕೆಲಸಗಳನ್ನು ಮುಂದುವರಿಸಲಿದ್ದಾರೆ,(ಏಜೆನ್ಸೀಸ್).