ಲೋಕಸಭಾ ಟಿಕೆಟ್ ಬಗ್ಗೆ ಆತಂಕ ಬೇಡ: ಸದಾನಂದಗೌಡರಿಗೆ ಪ್ರಲ್ಹಾದ ಜೋಶಿ ಅಭಯ

Pralhad Joshi
Published on

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸದಾನಂದಗೌಡ ಅವರನ್ನೂ ಒಳಗೊಂಡಂತೆ ಲೋಕಸಭೆಯ 13 ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗಳನ್ನು ಮಂಗಳವಾರ ಸುದ್ದಿಗಾರರ ಎದುರು ಪ್ರಸ್ತಾಪಿಸಿದ್ದ ಸದಾನಂದಗೌಡರು, ತಮಗೆ ಟಿಕೆಟ್ ನೀಡಲಾಗುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡಲೇ ಸ್ಪಷ್ಟಪಡಿಸಬೇಕು ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ದೆಹಲಿಯಲ್ಲಿ ಇಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ ಪ್ರಲ್ಹಾದ ಜೋಶಿ, ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಬಗ್ಗೆ ಸದಾನಂದಗೌಡರು ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ. ಬಿಜೆಪಿಯಲ್ಲಿ ಸದಾನಂದಗೌಡರಿಗೆ ಅವರದೇ ಆದ ಸ್ಥಾನಮಾನ ಇದೆ. ಅವರು ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಪಕ್ಷದಲ್ಲಿ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇಂತಹ ಹಿರಿಯ ನಾಯಕರಿಗೆ ಮಾಧ್ಯಮಗಳ ವರದಿಗಳ ಬಗ್ಗೆ ಯಾಕೆ ಭಯ? ಎಂಥದೇ ಸಂದರ್ಭದಲ್ಲಿಯೂ ಬಿಜೆಪಿ ನಾಯಕತ್ವವು ಸದಾನಂದಗೌಡರ ಜತೆಗಿರುತ್ತದೆ ಎಂದರು.

ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಚುನಾವಣೆ ಸಮೀಪಿಸಿದಾಗ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು. ಎಂಥದೇ ಸಂದರ್ಭದಲ್ಲಿಯೂ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನು ನಿರ್ಧರಿಸುತ್ತದೆಯೇ ಹೊರತು ಮಾಧ್ಯಮಗಳಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net