ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್​ ಶೂನ್ಯ ಸಾಧನೆ: ಪ್ರಲ್ಹಾದ ಜೋಶಿ | Delhi Election

ವಿಜಯವಾಣಿ - 2025-02-08T202316.684
Published on

ಹಾವೇರಿ: ಇಂದು ದೆಹಲಿ ವಿಧಾನಸಭಾ ಚುನಾವಣೆಯ ( Delhi Election) ಫಲಿತಾಂಶ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಸ್ಥಾಪಿಸಿದೆ. 48 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ, ಎಎಪಿ 22 ಗೆದ್ದಿದೆ. ಇನ್ನು ಕಾಂಗ್ರೆಸ್​ ಮಾತ್ರ ಒಂದೇ ಒಂದು ಕ್ಷೇತ್ರದಲ್ಲಿಯೂ ಗೆಲುವು ದಾಖಲಿಸಿಲ್ಲ. ಸದ್ಯ ಇದೇ ಈಗ ವಿಪಕ್ಷ ನಾಯಕರ ನಗೆಪಾಟಲಿಗೆ ಕಾರಣವಾಗಿದೆ.

ಈ ಕುರಿತು ಇಂದು (ಫೆ.08) ರಾಣೆಬೆನ್ನೂರಿನ ನಗರದ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, "ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ಶೂನ್ಯ ಸಾಧನೆ ಮಾಡಿದೆ. ಇನ್ನು ಮುಂದೆಯಾದರೂ ಹಿಂದುಗಳ ಅಪಮಾನಿಸುವುದು, ಅವಮಾನಿಸುವುದನ್ನು ಬಿಡಬೇಕು. ದೇಶದ ಆಸ್ತಿಕರನ್ನು ಅಪಮಾನ ಮಾಡುವಂಥ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಅದಕ್ಕೆ ಮತದಾರರು ತಕ್ಕ ಶಾಸ್ತಿಯೇ ಮಾಡಿದ್ದಾರೆ" ಎಂದರು.

"ಅಹಂಕಾರದ ಪರಮಾವಧಿ ಹೊಂದಿದ್ದ ಕೇಜ್ರಿವಾಲ್​ನ ಗುಡಿಸಿ ಪೊರಕೆಯನ್ನು ಮೂಲೆಯಲ್ಲಿ ಇಟ್ಟಿದ್ದಾರೆ. ಕಾಂಗ್ರೆಸ್ ಪಾರ್ಟಿ ಸೋತಾಗ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಗೆದ್ದರೆ ಅದಕ್ಕೆ ಏನೂ ತೊಂದರೆ ಇರುವುದಿಲ್ಲ ಅವರಿಗೆ" ಎಂದರು.

ಇನ್ನು ಬಿಜೆಪಿ ಆಂತರಿಕ ಸಮಸ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಜೋಶಿ, "ರಾಜ್ಯ ಬಿಜೆಪಿಯಲ್ಲಿ ಎಲ್ಲ ಸರಿ ಆಗುತ್ತೆ. ಕೇಂದ್ರ ನಾಯಕರ ಗಮನ ಚುನಾವಣೆಯತ್ತ ವಾಲಿತ್ತು. ಈಗ ಚುನಾವಣೆ ಮುಗಿದಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿ ಮಾಡುತ್ತೇವೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net