ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಫೆ. 10ರಂದು

Published on

ಹುಬ್ಬಳ್ಳಿ: ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮಿಗಳ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ರಾಷ್ಟ್ರೀಯ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮವನ್ನು ಫೆ. 10ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಬ್ರಹ್ಮವಿದ್ಯಾನಗರದಲ್ಲಿ ಏರ್ಪಡಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಲಕ್ಷ್ಮಣ ಉಪ್ಪಾರ, ಅಂದು ಬೆಳಗ್ಗೆ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಪಟ್ಟಾಭಿಷೇಕ ಮಹೋತ್ಸವ, ಕಿರೀಟಧಾರಣೆ ಕಾರ್ಯಕ್ರಮ ಜರುಗಲಿದ್ದು, ನಾಡಿನ ವಿವಿಧ ಮಠಾಧೀಶರು, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು ಹಾಗೂ ಇತರರು ಆಗಮಿಸುವರು ಎಂದರು.

ಬೆಳಗ್ಗೆ 9ಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ರವೀಂದ್ರನಾಥ ನೇತೃತ್ವದ ತಂಡ ಹಾಗೂ ಚಿತ್ರದುರ್ಗ ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜ್ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. 9.30ಕ್ಕೆ ರಾಜ್ಯಮಟ್ಟದ ಭಾರಿ ಟಗರಿನ ಕಾಳಗ ಹಾಗೂ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ಜರುಗಲಿದೆ. ಸಂಜೆ 7ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

‘ಭಗೀರಥ’ ಚಲನಚಿತ್ರವನ್ನು ಬಿಡುಗಡೆ ಮಾಡಬಾರದು. ಅದರಲ್ಲಿ ಪೌರಾಣಿಕ ಸನ್ನಿವೇಶಗಳಿಲ್ಲ. ಮಹಿಳೆಯರ ಉಡುಗೊರೆ ಬಗ್ಗೆ ವಿಚಿತ್ರವಾಗಿ ತೋರಿಸಲಾಗಿದೆ. ಭಗೀರಥ ಮಹರ್ಷಿಗಳ ಬಗೆಗೆ ಆಶ್ಲೀಲವಾಗಿ ಹಾಡು ರಚಿಸಲಾಗಿದೆ. ಹಾಡು ತೆಗೆಯಬೇಕು. ಶೀರ್ಷಿಕೆಯನ್ನೂ ಬದಲಿಸಬೇಕು. ಚಲನಚಿತ್ರ ಮಂಡಳಿಯವರು ಕೂಡಲೇ ಈ ಚಿತ್ರವನ್ನು ತಡೆ ಹಿಡಿಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಸತೀಶ ಮುರಗೋಡ, ಪಾಲಿಕೆ ಮಾಜಿ ಸದಸ್ಯ ಬಲರಾಮ ಕುಸುಗಲ್, ಪ್ರಮುಖರಾದ ಹನುಮಂತಪ್ಪ ಉಪ್ಪಾರ, ರಮೇಶ ಉಪ್ಪಾರ, ಸಹದೇವ ಬೇವಿನಮರದ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net