ಯಡಿಯೂರಪ್ಪ ವಿರುದ್ಧ ಆಡಳಿತ ಪಕ್ಷದ ಷಡ್ಯಂತ್ರ ಎಂದ ಪ್ರಹ್ಲಾದ ಜೋಶಿ!

joshi
Published on

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಆಡಳಿತ ಪಕ್ಷದ ಷಡ್ಯಂತ್ರವಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನೂರಕ್ಕೆ ನೂರರಷ್ಟು ರಾಜ್ಯ ಸರ್ಕಾರದ ಷಡ್ಯಂತ್ರ ಇದು ಎಂದು ಆರೋಪಿಸಿದರು.

ಯಡಿಯೂರಪ್ಪ ಅವರ ವಯಸ್ಸೇನು, ಅವರ ಹಿರಿತನ ವೇನು, ಅವರ ಸ್ಟೇಟಸ್ ಏನು, ಅವರ ವಿರುದ್ಧ ಈ ರೀತಿ ಷಡ್ಯಂತ್ರ ಮಾಡುವುದು ಎಂದರೆ ಎಂಥಾ ಅನ್ಯಾಯವಿದು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಒಬ್ಬ ಪ್ರಭಾವಿ, ಹಿರಿಯ ರಾಜಕಾರಣಿ ಮೇಲೆ ಈ ರೀತಿ ಸುಳ್ಳು ದೂರು ದಾಖಲಿಸುವುದು ನಿಜಕ್ಕೂ ಅಕ್ಷಮ್ಯ ಎಂದ ಸಚಿವ ಜೋಶಿ, ಕಾನೂನು ರೀತಿ ತನಿಖೆ ಆಗುತ್ತದೆ. ಅವರು ಇದರಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಎಫ್​ಐಆರ್​​ಗೆ ಸಂಬಂಧಿಸಿ ತನಿಖೆಯ ಹೊಣೆಯನ್ನು ಸಿಐಡಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಯಡಿಯೂರಪ್ಪ ವಿರುದ್ಧದದ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸುವುದಾಗಿ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶವನ್ನೂ ಹೊರಡಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ದೂರು ದಾಖಲಾಗಿತ್ತು. ಈ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net