

ಆಂಧ್ರಪ್ರದೇಶ: ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಹಾಗೂ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರ ಜೂನ್. 27, 2024ರಂದು ಬಹುತೇಕ ಚಿತ್ರಮಂದಿಗಳಲ್ಲಿ ಜಾಗತಿಕವಾಗಿ ಬಿಡುಗಡೆಗೊಂಡಿತು. ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ಕಲ್ಕಿ, ನಂತರದ ದಿನಗಳಲ್ಲಿಯೂ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ.
ಮೊದಲ ವಾರದ ಅಂತ್ಯಕ್ಕೆ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 725 ಕೋಟಿ ರೂ. ಕಲೆಕ್ಷನ್ ಮಾಡಿರುವ ಸೈನ್ಸ್-ಫಿಕ್ಷನ್ ಆಧರಿತ ಸಿನಿಮಾ, ಇದೀಗ ಶೀಘ್ರವೇ 1000 ಕೋಟಿ ರೂ. ಕ್ಲಬ್ ಸೇರಲಿದೆ. ನಾಗ್ ಅಶ್ವಿನ್ ನಿರ್ದೇಶನಕ್ಕೆ ಫಿದಾ ಆಗಿರುವ ಸಿನಿಪ್ರಿಯರು ಚಿತ್ರದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಪಾತ್ರ ಹಾಗೂ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಸಂದರ್ಶನ ನೀಡಿದ ನಿರ್ದೇಶಕರು ಹೊಸ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಸಿನಿಮಾ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕರು, 'ಕಲ್ಕಿ' ಯೂನಿವರ್ಸ್ ಸೃಷ್ಟಿಸಲು ಮುಂದಾಗಿದ್ದಾರೆ. ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿರುವ ನಾಗ್ ಅಶ್ವಿನ್, ಚಿತ್ರದ ಎರಡನೇ ಭಾಗ ಬಹುತೇಕ ಮುಗಿದಿಲ್ಲ. ಕೇವಲ 25-30 ದಿನಗಳ ಶೂಟಿಂಗ್ ನಡೆದಿದೆ ಅಷ್ಟೇ. ಇದನ್ನು ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುವ ಭರವಸೆಯಿದೆ. ಮೊದಲ ಭಾಗಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ಲಭಿಸಿವೆ. ಹಾಗಾಗಿ ಪಾರ್ಟ್-2 ಬಗ್ಗೆ ಸದ್ಯ ನಿರಾಳರಾಗಿದ್ದೇವೆ ಎಂದಿದ್ದಾರೆ.
ಇನ್ನು ಚಿತ್ರದ ನಿರ್ಮಾಪಕರಾದ ಅಶ್ವಿನಿ ದತ್ ಕೂಡ ಮಾತನಾಡಿ, "ಕಲ್ಕಿ ಮುಂದುವರಿದ ಭಾಗ ಬರಲಿದೆ. ಸಿನಿಮಾಗೆ ಸಂಬಂಧಿಸಿದ ಕೆಲಸಗಳು ಇದೇ ವರ್ಷದ ಕೊನೆಯಲ್ಲಿ ಪ್ರಾರಂಭವಾಗಲಿದೆ. 2025ರ ಮೇ ಮತ್ತು ಜುಲೈ ನಡುವೆ ಸೀಕ್ವೆಲ್ ರಿಲೀಸ್ ಮಾಡುವ ಗುರಿಯನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ. ಯಾವುದಕ್ಕೂ ಚಿತ್ರತಂಡದಿಂದ ಹೊರಬೀಳುವ ಅಧಿಕೃತ ಘೋಷಣೆಗಾಗಿ ನಿರೀಕ್ಷಿಸಬೇಕಿದೆ. ಚಿತ್ರದಲ್ಲಿ
ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ಅಮಿತಾಬ್ ಬಚ್ಚನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).