

ಆಂಧ್ರಪ್ರದೇಶ: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಸದ್ಯ ಅವರ ಬಹು ನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಮೊದಲು ಚಿತ್ರವನ್ನು ಪ್ರಾಜೆಕ್ಟ್ ಕೆ ಎಂದು ಕರೆಯಲಾಗುತ್ತಿತ್ತು. ಚಿತ್ರವು ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಪ್ರಭಾಸ್ ಅವರ ಕೊನೆಯ ಚಿತ್ರ ಆದಿಪುರುಷ. ಇದೀಗ ಕಲ್ಕಿ 2989D ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದ ಈ ಸಾಹಸಮಯ ಚಿತ್ರದಲ್ಲಿ ಬಿ ಟೌನ್ ನಟಿ ದೀಪಿಕಾ ಪಡುಕೋಣೆ ಕೂಡ ನಾಯಕಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಚಿತ್ರತಂಡವು ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ 2023 ರಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಅನಾವರಣಗೊಳಿಸಿತು. ಅಂದಹಾಗೆ ಸಂದರ್ಶನವೊಂದರಲ್ಲಿ ಪ್ರಭಾಸ್ ಅವರಿಗೆ ದೀಪಿಕಾ ಪಡುಕೋಣೆ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ, ಪ್ರಭಾಸ್ ದೀಪಿಕಾ ಅವರನ್ನು 'ದೊಡ್ಡ ಸೂಪರ್ ಸ್ಟಾರ್' ಎಂದು ಕರೆದರು. ಅತ್ಯಂತ ಸುಂದರ ಮಹಿಳೆ ಎಂದು ಕೊಂಡಾಡಿದರು.
"ದೀಪಿಕಾ ಪಡುಕೋಣೆ ಅವರು ಸೆಟ್‌ಗೆ ಬಂದಾಗ ಸಾಕಷ್ಟು ರೋಮಾಂಚನವಾಗುತ್ತಿತ್ತು. ನಾನು ಯಾವಾಗಲೂ ಅವರನ್ನು ಪ್ರೀತಿಸುತ್ತೇನೆ. ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ. ಈಗ 'ಕಲ್ಕಿ 2898 ಎಡಿ' ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.