

ಹೈದರಾಬಾದ್: ಜೂ. 27ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್ ಸ್ಟಾರ್, ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದಲ್ಲದೇ ಸಿನಿಪ್ರೇಕ್ಷಕರಿಂದ ಅತ್ಯುತ್ತಮ ವಿಮರ್ಶೆ ಕೂಡ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ ಪ್ರಭಾಸ್ ಹಾಗೂ ಚಿತ್ರತಂಡ, ಈ ಸಕ್ಸಸ್ಗೆ ಕಾರಣರಾದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಿದೆ. ಮೊದಲ ದಿನವೇ ನೋಡುಗರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,100 ಕೋಟಿ ರೂ. ಕ್ಲಬ್ ಸೇರುವುದರ ಜತೆಗೆ ಟಾಲಿವುಡ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.
ತಮ್ಮ ನೆಚ್ಚಿನ ನಟ ಪ್ರಭಾಸ್ ಅವರ ಪ್ಯಾನ್ ಇಂಡಿಯಾ 'ಕಲ್ಕಿ' ಸಿನಿಮಾದ ಯಶಸ್ಸಿಗೆ ಭಾರೀ ಸಂತಸಪಟ್ಟಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, 2010ರಲ್ಲಿ ರೆಬೆಲ್ ಸ್ಟಾರ್ ಮತ್ತು ನಟಿ ಕಾಜಲ್ ಅಗರ್ವಾಲ್ ಅಭಿನಯದ ಬ್ಲಾಕ್ಬಸ್ಟರ್ 'ಡಾರ್ಲಿಂಗ್' ಸಿನಿಮಾ ಅಂದು ನೋಡುಗರ ಮನಗೆದ್ದು, ಕ್ಲಾಸಿಕ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿತ್ತು. ಇದೀಗ ಈ ಸಿನಿಮಾ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲು ಎದುರುನೋಡುತ್ತಿದೆ.
ಕಳೆದ ಕೆಲವು ದಿನಗಳಿಂದ ಈ ಕುರಿತು ಜಾಲತಾಣಗಳಲ್ಲಿ ಭಾರೀ ವದಂತಿಗಳು ಹರಿದಾಡುತ್ತಿತ್ತು. ಆದ್ರೆ, ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ನಿರ್ದೇಶಕ ಎ. ಕರುಣಾಕರನ್ ನಿರ್ದೇಶಿಸಿದ 'ಡಾರ್ಲಿಂಗ್' ಸಿನಿಮಾವನ್ನು ಇದೇ ಸೆಪ್ಟಂಬರ್ 23ರಂದು ಕೆಲವು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ. ರೊಮ್ಯಾನ್ಸ್, ಕಾಮಿಡಿ, ಡ್ರಾಮಾ ಜಾನರ್ ಹೊಂದಿರುವ ಈ ಚಿತ್ರವು ಅಂದು ಸೂಪರ್ಹಿಟ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿ ಹೊರಹೊಮ್ಮಿತ್ತು. ತೆರೆಮೇಲೆ ಪ್ರಭಾಸ್-ಕಾಜಲ್ ಜೋಡಿ ಮಾಡಿದ್ದ ಮೋಡಿ ಇಂದಿಗೂ ಪ್ರೇಕ್ಷಕರ ಕಣ್ಣಿನಲ್ಲಿ ಕಟ್ಟಿದಂತಿದೆ ಎಂದರೆ ತಪ್ಪಾಗಲಾರದು.
ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆಯಿದೆ. ಚಿತ್ರದಲ್ಲಿ ಪ್ರಭಾಸ್, ಕಾಜಲ್ ಅಗರ್ವಾಲ್, ಪ್ರಭು, ಶ್ರದ್ಧಾ ದಾಸ್, ಅತುಥಿ ಪ್ರಸಾದ್, ಎಂ.ಎಸ್. ನಾರಾಯಣ, ಮುಖೇಶ್ ರಾಶಿ, ಕೋಟಾ ಶ್ರೀನಿವಾಸ್ ರಾವ್, ಶ್ರೀನಿವಾಸ ರೆಡ್ಡಿ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).