

ನೆಲಮಂಗಲ: ಲೀಲಾವತಿ ಅಗಲಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಲೀಲಾವತಿ ದೇಗುಲ ಶೀರ್ಷಿಕೆಯಡಿ ಪುತ್ರ ವಿನೋದ್ರಾಜ್ ಸ್ಮಾರಕ ನಿರ್ವಿುಸಿದ್ದು, ಡಿ.5ರಂದು ಉದ್ಘಾಟನೆಯಾಗಲಿದೆ.
ಸೋಲದೇವನಹಳ್ಳಿಯ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಲೀಲಾವತಿ ಅವರ ಅಪರೂಪದ ಚಿತ್ರ ಸಂಪುಟಗಳ ಕಲಾತ್ಮಕವಾದ ಭವ್ಯ ಮಂದಿರ (ಸಮಾಧಿ) ನಿರ್ವಣಗೊಂಡಿದೆ. ಒಳ ಆವರಣದ ಸುತ್ತಲೂ ಅಪರೂಪದ 62 ಚಿತ್ರಪಟ ಅಳವಡಿಸಲಾಗಿದೆ. ಪಕ್ಕದಲ್ಲಿ ಅಮ್ಮನ ಆಸೆಯಂತೆ ಚಿಕ್ಕ ರಂಗಮಂದಿರ ನಿರ್ವಿುಸಲಾಗಿದೆ. ಸಣ್ಣಸಣ್ಣ ರಂಗ ಪ್ರದರ್ಶನಗಳು, ಸಭೆ ಸಮಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಲೀಲಾವತಿ ಅವರ ಪುತ್ರ, ನಟ ವಿನೋದ್ರಾಜ್ ತಿಳಿಸಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಮಂದಿರ ತೆರೆದಿರುತ್ತದೆ. ಸುಸಜ್ಜಿತ ಪಾಕಶಾಲೆ, ಭೋಜನಾಲಯವಿದೆ. ಅಭಿಮಾನದಿಂದ ಅಮ್ಮನ ಮಡಿಲಲ್ಲಿ ಒಂದೆರಡು ದಿನ ಕಳೆಯಬೇಕೆನ್ನುವವರಿಗೆ ವಸತಿ ವ್ಯವಸ್ಥೆಗಾಗಿ ಸುಸಜ್ಜಿತ ಎರಡು ಕೊಠಡಿ ಹಾಗೂ ಉದ್ಯಾನ ನಿರ್ವಿುಸಲಾಗುತ್ತಿದೆ ಎಂದು ನಟ ವಿನೋದ್ ರಾಜ್ ಮಾಹಿತಿ ನೀಡಿದ್ದಾರೆ.
₹1 ಕೋಟಿ ವೆಚ್ಚದಲ್ಲಿ ನಿರ್ಮಾಣ: ನೆಲಮಂಗಲದಿಂದ ಸುಮಾರು 8 ಕಿಮೀ ದೂರದ ಸೋಲದೇವನಹಳ್ಳಿಯಲ್ಲಿ ನೆಲೆಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ, ಪಶು ಆಸ್ಪತ್ರೆ ಸೇರಿ ಸಾಕಷ್ಟು ಸಮಾಜಮುಖಿ ಕಾರ್ಯವನ್ನು ಪುತ್ರ ವಿನೋದ್ರಾಜ್ ಮಾಡಿದ್ದಾರೆ. ನಟಿ ಲೀಲಾವತಿ ಮೃತಪಟ್ಟ ಬಳಿಕ ಅವರ ಸಮಾಧಿಯನ್ನು ಪ್ರೇಕ್ಷಣೀಯ ಸ್ಥಳವಾಗಿ ಸುಮಾರು 1ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.
ಹಲವರು ಭಾಗಿ: ಲೀಲಾವತಿ ದೇಗುಲ ಡಿ.5ರಂದು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀಡಾ.ನಿರ್ಮಲಾನಂದನಾಥಸ್ವಾಮೀಜಿ, ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ದೇಗುಲವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೆ.ಎಚ್.ಮುನಿಯಪ್ಪ, ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ ಎನ್.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿನೋದ್ರಾಜ್ ತಿಳಿಸಿದ್ದಾರೆ.
ದಿವಂಗತ ಡಾ.ಎಂ.ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಱುನ್ನತ ಪ್ರಶಸ್ತಿ ಡಾ.ರಾಜಕುಮಾರ್ ಪ್ರಶಸ್ತಿಯನ್ನು 1999-2000ನೇ ಸಾಲಿನಲ್ಲಿ ಲೀಲಾವತಿ ಅವರಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಲಾಗಿದೆ, ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಲೀಲಾವತಿ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ, ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.