

ತಿರುವನಂತಪುರಂ: ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದಿರುವ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಕಟೌಟ್ ಮೇಲೆ ಕಪ್ಪು ಆಯಿಲ್ ಸುರಿಯುವ ಮೂಲಕ ಕೇರಳದ ಕಾಂಗ್ರೆಸ್ ಘಟಕ ಹೋರಾಟ ನಡೆಸಿದೆ.
ಸಚನ್ ಅವರ ಕಟೌಟ್ಗೆ ಕೇರಳ ಕಾಂಗ್ರೆಸ್ನ ಯುವ ಘಟಕ ಶನಿವಾರದಂದು ಕೊಚ್ಚಿಯಲ್ಲಿ ಕಪ್ಪು ಆಯಿಲ್ ಎರಚಿದೆ. ಅವರು ಮಾಡಿರುವ ಟ್ವೀಟ್ಗೆ ಪ್ರತಿಯಾಗಿ ಈ ಕೆಲಸ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಭಾರತದ ಕ್ರಿಕೆಟ್ ದೇವರು ಎಂದು ಗೌರವಿಸುವ ವ್ಯಕ್ತಿಯ ಕಟೌಟ್ಗೆ ಈ ರೀತಿ ಮಾಡಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ರೈತ ಹೋರಾಟದ ಬಗ್ಗೆ ವಿದೇಶಿ ಸೆಲೆಬ್ರಿಟಿಗಳು ಮತ್ತು ಹೋರಾಟಗಾರರು ಮೂಗು ತೂರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿನ್, ಅದರ ವಿರುದ್ಧವಾಗಿ ಟ್ವೀಟ್ ಮಾಡಿದ್ದರು. "ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ತಿಳಿದಿದೆ ಮತ್ತು ಭಾರತಕ್ಕಾಗಿ ಏನು ಬೇಕೆನ್ನುವುದನ್ನು ನಿರ್ಧರಿಸಬೇಕಿದೆ. ನಾವೆಲ್ಲರು ಒಂದು ರಾಷ್ಟ್ರವಾಗಿ ಐಕ್ಯವಾಗಿ ಉಳಿಯೋಣ." ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಅನೇಕರು ಅವರ ಕಾಲೆಳೆಯುವುದರಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್)