ಅರಳಸುರಳಿ ರಸ್ತೆಯಲ್ಲಿ ಗುಂಡಿಗಳ ದರ್ಶನ

road
ಕಡೇಗದ್ದೆ-ಅರಳಸುರುಳಿ ಮಾರ್ಗದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು.
Published on

ತೀರ್ಥಹಳ್ಳಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನದಲ್ಲಿ ನಿರ್ಮಿಸಿದ್ದ ಆರಗ ಗ್ರಾಪಂ ವ್ಯಾಪ್ತಿಯ ಕಡೇಗದ್ದೆ-ಅರಳಸುರುಳಿ ರಸ್ತೆಯಲ್ಲಿ ಹೊಂಡ, ಗುಂಡಿಗಳಾಗಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಕಡೇಗದ್ದೆಯಿಂದ ಮುಂದಿನ ಸುಮಾರು 4 ಕಿ.ಮೀ ಉದ್ದದ ರಸ್ತೆಯಲ್ಲಿ ಅಡಿಗಡಿಗೆ ಬಿದ್ದಿರುವ ಗುಂಡಿಗಳಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವುದು ದುಸ್ತರವಾಗಿದೆ. ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಹೋಗಿದ್ದು, ಇದು ಡಾಂಬರೀಕರಣವಾದ ರಸ್ತೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರ ಅಳಲು ಕೇಳುವವರೇ ಇಲ್ಲವಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆ ತೀರ್ಥಹಳ್ಳಿ-ಹೊಸನಗರ ನಡುವಿನ ಪ್ರಮುಖ ಸಂಪರ್ಕ ಮಾರ್ಗವೂ ಆಗಿರುವ ಕಾರಣ ವಾಹನಗಳ ಸಂಚಾರ ನಿರಂತರವಾಗಿರುತ್ತದೆ. ಕಳೆದೆರಡು ವರ್ಷಗಳಿಂದ ಕನಿಷ್ಠ ನಿರ್ವಹಣೆಯೂ ಇಲ್ಲ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನಗಳ ಚಾಲಕರು ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ಗುಂಡಿಗಳನ್ನು ಮಣ್ಣಿನಲ್ಲಿ ಮುಚ್ಚಲಾಗುತ್ತಿದೆ.

ರಸ್ತೆ ನಿರ್ಮಿಸಿ ಐದು ವರ್ಷಗಳಾಗಿವೆ. ಇಷ್ಟರಲ್ಲೇ ಮರು ಡಾಂಬರೀಕರಣ ಮಾಡಲಾಗುವುದು. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಗುತ್ತಿಗೆದಾರ ಶೇಷಗಿರಿ ಅವರಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಗ್ರಾಮ ಸಡಕ್ ಯೋಜನೆ ಎಇಇ ಕುಮಾರ್.

ಕಡೇಗದ್ದೆ ರಸ್ತೆ ಮಳೆಗಾಲದಲ್ಲಿ ಕೆಸರುಮಯ ಆಗಿರುತ್ತದೆ. ಬೇಸಿಗೆಯಲ್ಲಿ ಧೂಳು ತುಂಬಿರುತ್ತದೆ. ಸಂಬಂಧಿಸಿದವರು ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ ಎಂಬುದು ಅರಳಸುರಳಿ ಗ್ರಾಮಸ್ಥರ ಆರೋಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net