ಸಕಾರಾತ್ಮಕ ಬೆಳವಣಿಗೆ; ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ಸಹಾಯಕಾರಿ

Opportunity
Published on

ಶುಕ್ರವಾರ ಬೆಂಗಳೂರಿನಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ‘ಅಮೆರಿಕದ ಹೊರಗೆ ಅತಿದೊಡ್ಡ ವಾಯುಯಾನ ಕ್ಷೇತ್ರದ ಸೌಲಭ್ಯವನ್ನು ಬೆಂಗಳೂರಿನಲ್ಲಿ ಸೃಜಿಸುವ ಮೂಲಕ ಭಾರತದ ಪ್ರತಿಭೆಯಲ್ಲಿ ವಿಶ್ವದ ನಂಬಿಕೆಯನ್ನು ಬೋಯಿಂಗ್ ದೃಢಪಡಿಸಿದೆ. ಮುಂದಿನ ಪೀಳಿಗೆ ಅಪೇಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನ, ವೈಶಿಷ್ಟ್ಯಪೂರ್ಣ ವಿನ್ಯಾಸ ಹೊಂದಿದ ವಿಮಾನಗಳು ಆದಷ್ಟು ಬೇಗ ದೇಶದಲ್ಲೇ ಅದರಲ್ಲೂ ಬೆಂಗಳೂರಿನಲ್ಲೇ ನಿರ್ವಣವಾಗಲಿವೆ’ ಎಂದಿದ್ದಾರೆ. ವಿಕಾಸದ ಹಾದಿ ವಿಸ್ತಾರಗೊಳಿಸಲು ಮತ್ತು ಯುವಕರ ಸಹಭಾಗಿತ್ವ ಹೆಚ್ಚಿಸಲು ಇಂಥ ಕ್ರಮಗಳು ಸಹಕಾರಿ. 43 ಎಕರೆ ಕ್ಯಾಂಪಸ್ ಹೊಂದಿರುವ ಈ ಕೇಂದ್ರಕ್ಕೆ 1600 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಆತ್ಮನಿರ್ಭರ ಪರಿಕಲ್ಪನೆಯಡಿ ನಿರ್ವಿುಸಲಾಗಿದ್ದು, ಏರೋಸ್ಪೇಸ್ ಇಂಜಿನಿಯರಿಂಗ್ ಸಂಶೋಧನೆ, ಅಭಿವೃದ್ಧಿ, ತಯಾರಿಕೆ, ಪೈಲಟ್ ಆಗಲು ಬಯಸುವ ಯುವತಿಯರಿಗಾಗಿ ‘ಬೋಯಿಂಗ್ ಸುಕನ್ಯಾ ಕಾರ್ಯಕ್ರಮ’ಕ್ಕೂ ಪ್ರಧಾನಿ ಚಾಲನೆ ನೀಡಿರುವುದು ಗಮನಾರ್ಹ.

ಇನ್ನೊಂದೆಡೆ ಸ್ವಿಜರ್ಲೆಂಡಿನ ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ರಾಜ್ಯದ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಭಾಗಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಕಂಪನಿಗಳ ಜತೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಹಲವಾರು ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆಯ ಭರವಸೆಯನ್ನು ನೀಡಿವೆ. ಅದರಲ್ಲೂ, ಮಂಗಳವಾರ ಒಂದೇ ದಿನ ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ಹಲವು ಕಂಪನಿಗಳು ರಾಜ್ಯಕ್ಕೆ ಬರಲಿದ್ದು ಉದ್ಯಮದ ಮೂಲಕ ಉದ್ಯೋಗಸೃಷ್ಟಿಗೆ ಒತ್ತು ನೀಡಲಿವೆ, ಆರ್ಥಿಕ ಚಟುವಟಿಕೆಗಳಿಗೂ ಇನ್ನಷ್ಟು ಬಲ ಬರಲಿದೆ.

ಈ ಎಲ್ಲ ಬೆಳವಣಿಗೆಗಳು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಖಂಡಿತವಾಗಿಯೂ ಸಕಾರಾತ್ಮಕ ಹೆಜ್ಜೆಗಳು. ಅಭಿವೃದ್ಧಿಯ ವೇಗ ಮತ್ತು ಉದ್ಯೋಗಾವಕಾಶ ಹೆಚ್ಚಿಸುವುದಕ್ಕೆ ಪೂರಕವಾದ ಇಂತಹ ಹೂಡಿಕೆ ಪ್ರಸ್ತಾವನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲಿ. ಆದರೆ, ಇಂಥ ಹೂಡಿಕೆಗಳು, ಹೊಸ ಕೈಗಾರಿಕೆಗಳು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗಷ್ಟೇ ಸೀಮಿತವಾಗಿ ಉಳಿಯಬಾರದು. ರಾಜ್ಯದ ಇತರ ಜಿಲ್ಲೆಗಳಿಗೂ ಬಂಡವಾಳ ಹರಿದುಬರುವ ನಿಟ್ಟಿನಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕು. ವಿವಿಧ ಸವಲತ್ತುಗಳನ್ನು ಒದಗಿಸುವ ಮೂಲಕ, ಹಿಂದುಳಿದ ಜಿಲ್ಲೆಗಳಿಗೂ ಹೂಡಿಕೆದಾರರನ್ನು ಆಕರ್ಷಿಸಿ, ಆ ಭಾಗದ ಸರ್ವತೋಮುಖ ಅಭಿವೃದ್ಧಿಗೂ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net