

ರಾಘವ ಶರ್ಮ ನಿಡ್ಲೆ, ನವದೆಹಲಿ
‘ಸುಮಾರು 25 ಕೋಟಿ ಜನಸಂಖ್ಯೆಯಿರುವ ಉತ್ತರ ಪ್ರದೇಶ ಗೆದ್ದರೆ ದೇಶ ಗೆದ್ದಂತೆ’. ಪ್ರತಿ ಲೋಕಸಭೆ ಚುನಾವಣೆ ಬಂದಾಗಲೂ ಈ ಮಾತು ಮುನ್ನೆಲೆಗೆ ಬರುತ್ತದೆ. ಅತಿಹೆಚ್ಚು (80) ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸೀಟುಗಳನ್ನು ಗೆದ್ದ ಪರಿಣಾಮ ಅಧಿಕಾರ ಹಿಡಿಯುವುದು ಸಲೀಸಾಯಿತು. ಈ ಬಾರಿಯೂ ಉತ್ತರ ಪ್ರದೇಶದ ಮೇಲೆ ಕಣ್ಣಿಟ್ಟಿರುವ ಕೇಸರಿಪಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನಪ್ರಿಯತೆಯನ್ನೇ ನೆಚ್ಚಿಕೊಂಡಿದೆ. ಇನ್ನೊಂದೆಡೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಬಿಟ್ಟರೆ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ ಚಿತ್ರಣದಲ್ಲಿದ್ದಂತೆ ಕಾಣುತ್ತಿಲ್ಲ. ಆದರೂ, ಕಳೆದ ಲೋಕಸಭೆ ಚುನಾವಣೆಯಲ್ಲಿ 10 ಸೀಟುಗಳನ್ನು ಗೆದ್ದುಕೊಂಡಿದ್ದ ಮಾಯಾವತಿ ನೇತೃತ್ವದ ಬಿಎಸ್ಪಿ, ಈ ಬಾರಿಯೂ ಏಕಾಂಗಿ ಹೋರಾಟಕ್ಕಿಳಿಯುವ ಲಕ್ಷಣಗಳಿವೆ. ಸಮಾಜವಾದಿ-ಕಾಂಗ್ರೆಸ್ ಒಳಗೊಂಡ ಇಂಡಿಯಾ ಮೈತ್ರಿಕೂಟಕ್ಕೆ ಸೇರಿಕೊಳ್ಳುವ ಖಚಿತತೆ ಇಲ್ಲ. ‘ನಮ್ಮೊಂದಿಗೆ ಸೇರಿಕೊಳ್ಳಿ’ ಎಂದು ಕಾಂಗ್ರೆಸ್ ಆಹ್ವಾನ ನೀಡಿದ್ದರೂ, ಮಾಯಾವತಿ ಸದ್ಯಕ್ಕೆ ಮೌನವಾಗಿದ್ದಾರೆ.
ವಾರಾಣಸಿ, ರಾಯ್ಬರೇಲಿ, ಅಮೇಠಿ, ಮುಜಫರನಗರ, ಅಯೋಧ್ಯಾ, ಲಖನೌ ಸೇರಿ ಹಲವು ಹೈವೋಲ್ಟೇಜ್ ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜತೆಗೆ ಧಾರ್ವಿುಕ ಮತ್ತು ಸಾಂಸ್ಕೃತಿಕ ಪುನರುತ್ಥಾನದ ವಿಷಯಗಳನ್ನೇ ಜನರ ಮುಂದಿಡಲಿದೆ. ಯೋಗಿ ಮಾದರಿ ಆಡಳಿತವು ಗೂಂಡಾರಾಜ್ಯಕ್ಕೆ ಕಡಿವಾಣ ಹಾಕಿರುವುದು ಗ್ರಾಮೀಣ ಭಾಗದ ಮತದಾರರಲ್ಲಿ ಬಿಜೆಪಿ ಕಡೆ ಒಲವು ಹೆಚ್ಚಲು ಪ್ರಮುಖ ಕಾರಣ ಎನ್ನುವುದು ವಾಸ್ತವ ಕೂಡ.
2014ರ ಚುನಾವಣೆ ವೇಳೆ ವ್ಯಾಪಕವಾಗಿ ಹಬ್ಬಿದ್ದ ಮೋದಿ ಅಲೆ ಮತ್ತು ಕಾಂಗ್ರೆಸ್ ವಿರೋಧಿ ಭಾವನೆಯಿಂದಾಗಿ ರಾಜ್ಯದ ಬಹುಪಾಲು ಮತದಾರರು ಜಾತಿ-ಪಂಥಗಳಾಚೆ ಯೋಚಿಸಿ, ಬಿಜೆಪಿ ಬೆಂಬಲಿಸಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಿ, 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 325ನ್ನು ಗೆದ್ದುಕೊಂಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ 62 ಸೀಟುಗಳನ್ನು ತನ್ನದಾಗಿಸಿಕೊಂಡ ನಂತರ, 2022ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಿತು. ರಾಜ್ಯಾದ್ಯಂತ ಮಹಾರಾಜ್ ಎಂದೇ ಖ್ಯಾತಿಯಾಗಿರುವ ಸಿಎಂ ಯೋಗಿ ಆದಿತ್ಯನಾಥ್ಗೆ ಸರಿಸಾಟಿ ಎನಿಸುವ ವಿರೋಧ ಪಕ್ಷದ ನಾಯಕ ಸದ್ಯಕ್ಕಂತೂ ಕಾಣುತ್ತಿಲ್ಲ. ಅಖಿಲೇಶ್ ಯಾದವ್ ವಿಪಕ್ಷ ನಾಯಕನಾಗಿದ್ದರೂ, ರಾಜ್ಯದಲ್ಲಿ ಯೋಗಿ ನಾಯಕತ್ವದಲ್ಲಿ ಧಾರ್ವಿುಕ-ಸಾಂಸ್ಕೃತಿಕತೆಯ ಪುನರುತ್ಥಾನ ಬಿಜೆಪಿಯನ್ನು ರಾಜಕೀಯವಾಗಿ ಮತ್ತಷ್ಟು ಬಲಿಷ್ಠಗೊಳಿಸಿದೆ. ದಲಿತ ನಾಯಕಿ ಮಾಯಾವತಿಯವರಲ್ಲಿ ಹಿಂದಿನ ವರ್ಚಸ್ಸು ಈಗಿಲ್ಲ. ಇದು ಕೂಡ ಬಿಜೆಪಿಗೆ ನೆರವಾಗಿದೆ. ಸೋದರಳಿಯ ಆಕಾಶ್ ಆನಂದ್ರನ್ನು ಪಕ್ಷದಲ್ಲಿ ತನ್ನ ಉತ್ತರಾಧಿಕಾರಿ ಎಂದು ಮಾಯಾವತಿ ಘೋಷಿಸಿದ್ದರೂ, ರಾಜ್ಯ ರಾಜಕಾರಣದಲ್ಲಿ ಆಕಾಶ್ ಸದ್ದು ಮಾಡಬೇಕಷ್ಟೇ.
ಫಲಕೊಡದ ಬುವಾ-ಭತೀಜಾ ಮೈತ್ರಿ: 2014ರಲ್ಲಿ ಬಿಎಸ್ಪಿ, ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ, 2019ರಲ್ಲಿ ಬಿಜೆಪಿ ಸೋಲಿಸಲು ತಮ್ಮ ಒಗ್ಗೂಡುವಿಕೆ ಅನಿವಾರ್ಯ ಎಂದು ನಂಬಿದ ಬುವಾ-ಭತೀಜಾ ಜೋಡಿ (ಮಾಯಾವತಿ-ಅಖಿಲೇಶ್) ಮೋದಿಗೆ ಸೆಡ್ಡು ಹೊಡೆಯುವ ಯತ್ನ ಮಾಡಿತು. ರಾಷ್ಟ್ರೀಯ ಲೋಕದಳ ಕೂಡ ಈ ಮೈತ್ರಿಕೂಟ ಸೇರಿಕೊಂಡಿತ್ತು. 2019ರಲ್ಲಿ ಬಿಎಸ್ಪಿ 10, ಸಮಾಜವಾದಿ ಪಾರ್ಟಿ 5 ಸ್ಥಾನಗಳಿಗಷ್ಟೇ ಸೀಮಿತಗೊಂಡಿತು. ಫಲಿತಾಂಶ ಹೊರಬೀಳುತ್ತಿದ್ದಂತೆ ಪರಸ್ಪರ ದೂಷಿಸಿಕೊಂಡ ಬುವಾ-ಭತೀಜಾ, ಅಲ್ಲಿಗೇ ಮೈತ್ರಿ ಕಡಿದುಕೊಂಡರು. 2022ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸುಧಾರಿತ ನಿರ್ವಹಣೆ ತೋರಿದ್ದಲ್ಲದೆ, ಮತಗಳಿಕೆ ಪ್ರಮಾಣವನ್ನೂ ಹೆಚ್ಚಿಸಿಕೊಂಡಿತು. ಹೀಗಾಗಿ, ಪ್ರಮುಖ ವಿಪಕ್ಷ ಸ್ಥಾನದಲ್ಲಿದೆ. ಹಾಲಿ ಲೋಕಸಭೆ ಚುನಾವಣೆಗೆ ಮತ್ತೆ ಸಮಾಜವಾದಿಗಳ ಜತೆ ಮಾಯಾವತಿ ಕೈ ಜೋಡಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಗುಡುಗುತ್ತ, ಮಾಯಾವತಿ ಪರೋಕ್ಷವಾಗಿ ಬಿಜೆಪಿಗೆ ನೆರವಾಗುತ್ತಿದ್ದಾರೆ ಎಂಬ ಆರೋಪಗಳೂ ಇವೆ.
ಬಿಜೆಪಿಗೆ ಆರ್ಎಲ್ಡಿ ಬಲ: ಬಿಜೆಪಿಯ 2019ರ ಒಟ್ಟಾರೆ ನಿರ್ವಹಣೆ 2014ನ್ನು ಮೀರಿಸಿದ್ದರೂ, ಉತ್ತರ ಪ್ರದೇಶದಲ್ಲಿ ಸೀಟುಗಳ 71ರಿಂದ 62ಕ್ಕೆ ಇಳಿದಿತ್ತು. ಮುಖ್ಯವಾಗಿ, ದೆಹಲಿ ಗಡಿಯಿಂದ ಆರಂಭಗೊಳ್ಳುವ ಪಶ್ಚಿಮ ಉತ್ತರ ಪ್ರದೇಶದ 14 ಕ್ಷೇತ್ರಗಳಲ್ಲಿ 6ನ್ನು ಕಳೆದುಕೊಂಡಿತ್ತು. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ತಾವು ಪ್ರತಿನಿಧಿಸುವ ಪೂರ್ವ ಉತ್ತರ ಪ್ರದೇಶದ ವಾರಾಣಸಿಯಿಂದ ಪ್ರಚಾರಾಭಿಯಾನ ಆರಂಭಿಸುವ ಬದಲು ಪಶ್ಚಿಮ ಉತ್ತರ ಪ್ರದೇಶದ ಬುಲಂದ್ಶಹರ್ನಿಂದ ಮೊದಲ ಚುನಾವಣಾ ಪ್ರಚಾರಸಭೆ ಶುರು ಮಾಡಲಿದ್ದಾರೆ ಎನ್ನಲಾಗಿದೆ. ಮೇಲಾಗಿ, ಜಾಟ್ ಪ್ರಾಬಲ್ಯದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರತರತ್ನ ಚೌಧರಿ ಚರಣ್ ಸಿಂಗ್ ಮೊಮ್ಮಗ ಜಯಂತ್ ಚೌಧರಿ ನಾಯಕತ್ವದ ರಾಷ್ಟ್ರೀಯ ಲೋಕದಳ ಎನ್ಡಿಎ ಸೇರ್ಪಡೆ ಖಚಿತಗೊಂಡಿದೆ. 2013ರ ಮುಜಫರನಗರ ದಂಗೆ ಬಳಿಕ ಮುಸ್ಲಿಂ-ಜಾಟ್ ಮನಸ್ಸುಗಳು ವಿಭಜನೆಗೊಂಡಿರುವುದರಿಂದ 2014ರಿಂದ ಜಾಟರು ಆರ್ಎಲ್ಡಿ ಅಥವಾ ಬಿಜೆಪಿಯನ್ನೇ ಆಯ್ಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ.ಉತ್ತರ ಪ್ರದೇಶದಲ್ಲಿ ಬಿಜೆಪಿ ಸೀಟುಗಳಲ್ಲಿ ಗಣನೀಯ ಏರಿಕೆ ಕಂಡರೂ ಅಚ್ಚರಿ ಇಲ್ಲ. ಗೋರಖ್ಪುರ, ಆಜಂಗಢ, ವಾರಾಣಸಿ, ಮಿರ್ಜಾಪುರ ಸೇರಿ ಪೂರ್ವ ಉತ್ತರ ಪ್ರದೇಶದಲ್ಲಿ ಒಟ್ಟು 26 ಲೋಕಸಭೆ ಕ್ಷೇತ್ರಗಳಿವೆ. ಮೋದಿ ವಾರಾಣಸಿಯಲ್ಲಿ ಸ್ಪರ್ಧಿಸುವ ಕಾರಣಕ್ಕಾಗಿಯೇ ಪೂರ್ವ ಉತ್ತರ ಪ್ರದೇಶದಲ್ಲಿ ಕಳೆದೆರಡೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಂಡ ಅಲೆಯಿತ್ತು. ಎನ್ಡಿಎ ಮೈತ್ರಿಕೂಟದ ಅಪ್ನಾ ದಳ ಕೂಡ ಈ ಭಾಗದಲ್ಲಿ ಸ್ಪರ್ಧಿಸಿ, 2-3 ಸೀಟುಗಳನ್ನು ಗೆಲ್ಲುತ್ತ ಬಂದಿದೆ. ಕಾಂಗ್ರೆಸ್ ಪಕ್ಷ ಪೂರ್ವಾಂಚಲ ಭಾಗದ ಭೂಮಿಹಾರ್ ಸಮುದಾಯಕ್ಕೆ ಸೇರಿದ ಅಜಯ್ ರಾಯ್ರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ. 2014 ಮತ್ತು 19ರಲ್ಲಿ ಅಜಯ್ ರಾಯ್ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದರು.
ಪ್ರಿಯಾಂಕಾ ಕಣಕ್ಕೆ?: 2014, 2019ರ ಲೋಕಸಭೆ ಮತ್ತು 2017, 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ಚುನಾವಣಾ ರಾಜಕೀಯದಿಂದ ದೂರವುಳಿದಿದ್ದ ಪ್ರಿಯಾಂಕಾ ಗಾಂಧಿ ಈ ಬಾರಿ ರಾಯ್ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಬಹುದು. ತಾಯಿ ಸೋನಿಯಾ ಗಾಂಧಿ ರಾಜ್ಯಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಯ್ಬರೇಲಿಯಲ್ಲಿ ಪ್ರಿಯಾಂಕಾ ಕಣಕ್ಕಿಳಿಯುವ ಎಲ್ಲ ಸಾಧ್ಯತೆಗಳಿವೆ. 1952ರಿಂದ ಮೂರು ಅವಧಿಗಳಲ್ಲಿ ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲಿ ಮತದಾರರು ಕಾಂಗ್ರೆಸ್ಸಿಗರನ್ನೇ ಇಲ್ಲಿ ಆಯ್ಕೆ ಮಾಡಿದ್ದಾರೆ. 2004ರಿಂದ ಸತತ 4 ಬಾರಿ ರಾಯ್ಬರೇಲಿ ಗೆದ್ದಿರುವ ಸೋನಿಯಾ, ಪುತ್ರಿ ಪ್ರಿಯಾಂಕಾರಿಗೆ ಅಖಾಡ ಸಿದ್ಧಗೊಳಿಸಿದ್ದಾರೆ. ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಸೋನಿಯಾಗಿಂತ ಪ್ರಿಯಾಂಕಾ ಗಾಂಧಿಯೇ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದರಿಂದ ಮತದಾರರ ಜತೆಗಿನ ಒಡನಾಟ ಪ್ರಿಯಾಂಕಾಗೆ ನೆರವಾಗಬಹುದು. 2019ರಲ್ಲಿ ವಾರಾಣಸಿ ಕ್ಷೇತ್ರದಿಂದ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವೂ ಉಬ್ಬಿತ್ತು. ಆದರೆ, ಕಡೆಕ್ಷಣದಲ್ಲಿ ಪ್ರಿಯಾಂಕಾ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಕಂಡುಬಂತು. ಪ್ರಿಯಾಂಕಾ ತಮ್ಮ ಚುನಾವಣಾ ರಾಜಕೀಯ ಜೀವನವನ್ನು ಗೆಲುವಿನಿಂದ ಶುರು ಮಾಡಬೇಕು ಎಂಬ ಆಶಯ ಅವರ ಹಿಂಬಾಲಕರದ್ದಾಗಿತ್ತು. ಹೀಗಾಗಿ, ಮೋದಿ ವಿರುದ್ಧ ಕಣಕ್ಕಿಳಿಯುವ ಸಾಹಸ ಮಾಡಲಿಲ್ಲ. ಈ ಬಾರಿ ರಾಯ್ಬರೇಲಿಯಿಂದ ಸ್ಪರ್ಧಿಸಬಹುದು. ಆದರೆ, ‘ಸೇಫ್ ಸೀಟ್’ನಲ್ಲಿ ಸ್ಪರ್ಧಿಸುತ್ತಾರೆ ಎಂಬ ಟೀಕೆಗೆ ಗುರಿಯಾಗುವುದಂತೂ ನಿಜ.
2019ರಲ್ಲಿ ಅಮೇಠಿ ಕ್ಷೇತ್ರ ಗೆದ್ದ ಬಿಜೆಪಿ (ಸ್ಮೃತಿ ಇರಾನಿ) ಈ ಬಾರಿ ಅಮೇಥಿ ಜತೆ ರಾಯ್ಬರೇಲಿ ಗೆಲ್ಲಬೇಕೆಂಬ ತಂತ್ರ ಹೂಡುತ್ತಿದೆ. ಹಾಗಾಗಿ, ಸೇಫ್ ಸೀಟ್ನಲ್ಲೂ ಕಾಂಗ್ರೆಸ್ ಹಾದಿ ಸುಲಭದ್ದಾಗಿರದು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಸಲವೂ ಅಮೇಠಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಧೈರ್ಯವಿದ್ದರೆ ವಯನಾಡ್ ಬಿಟ್ಟು ಇದೊಂದೇ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಸ್ಮೃತಿ ಇರಾನಿ ಅಧಿಕೃತವಾಗಿ ಒಡ್ಡಿರುವ ಸವಾಲನ್ನು ಸ್ವೀಕರಿಸುವ ದಿಟ್ಟತನ ರಾಹುಲ್ ಪ್ರದರ್ಶಿಸುತ್ತಾರಾ ಕಾದು ನೋಡಬೇಕು.
ಜಾತಿ ಲೆಕ್ಕಾಚಾರ: 2014ರಲ್ಲಿ ಹಿಂದು ಮತಬ್ಯಾಂಕ್ ಕ್ರೋಡೀಕರಣದ ಜತೆಗೆ ಅಭೂತಪೂರ್ವ ಜಾತಿ ಸಮೀಕರಣವೂ ಬಿಜೆಪಿಗೆ ಫಲ ಕೊಟ್ಟಿತ್ತು. ಎಸ್ಪಿ ಯಾದವರು ಮತ್ತು ಬಿಎಸ್ಪಿ ಜಾಟವರನ್ನು ಬಿಟ್ಟರೆ ಉಳಿದ ಜಾತಿಗಳಿಗೆ ಮಾನ್ಯತೆ ನೀಡುತ್ತಿಲ್ಲ ಎಂಬ ಆಕ್ರೋಶವೂ ಮಡುಗಟ್ಟಿದ್ದರಿಂದ, ಸಮಾಜವಾದಿ ಬೆಂಬಲಿಸಿದ್ದ ಯಾದವೇತರ ಜಾತಿಗಳು ಮತ್ತು ಬಿಎಸ್ಪಿ ಬೆಂಬಲಿಸಿದ್ದ ಜಾಟವೇತರ (ಮಾಯಾವತಿ ಪ್ರತಿನಿಧಿಸುವ ಜಾತಿ ಜಾಟವ) ಹಿಂದುಳಿದ ಜಾತಿಗಳ ಮತದಾರರು ಬಿಜೆಪಿಗೆ ವೋಟು ಹಾಕಿದ್ದರು. ಮೇಲ್ವರ್ಗ, ಒಬಿಸಿ ಮತ್ತು ದಲಿತ ಮತಗಳನ್ನು ಸೆಳೆಯಲು ಆರ್ಎಸ್ಎಸ್ ಗ್ರೌಂಡ್ವರ್ಕ್ ಕೂಡ ಸಹಕಾರಿಯಾಗಿ, ರಾಜ್ಯದ 17 ಮೀಸಲು ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದವು. ಆದರೆ, 2019ರಲ್ಲಿ ಬಿಜೆಪಿ ಸಂಖ್ಯೆ 15ಕ್ಕಿಳಿಯಿತು ಮತ್ತು ಉಳಿದ 2 ಮೀಸಲು ಸೀಟುಗಳನ್ನು ಬಿಎಸ್ಪಿ ಗೆದ್ದುಕೊಂಡಿತ್ತು. ಈ ಬಾರಿ ರಾಜ್ಯದ ನಾಲ್ಕೂ ರಾಜಕೀಯ ಪಕ್ಷಗಳು ದಲಿತ ಮತಗಳ ಮೇಲೆ ಕಣ್ಣಿಟ್ಟಿರುವುದರಿಂದ ಕಳೆದೊಂದು ವರ್ಷದಿಂದ ದಲಿತರನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬಂದಿವೆ.