

| ಕೀರ್ತಿನಾರಾಯಣ ಸಿ. ಬೆಂಗಳೂರು
ಪೊಲೀಸರಿಗೆ ಕೊಟ್ಟ ಆಹಾರದಲ್ಲಿ ‘ಸತ್ತ ಇಲಿ’ ಪತ್ತೆಯಾದ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬಂದೋಬಸ್ತ್ಗೆ ನಿಯೋಜನೆಗೊಳ್ಳುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನಿಗದಿಪಡಿಸಿರುವ ‘ಆಹಾರ ಭತ್ಯೆ’ಯ ಹಣ ದುರ್ಬಳಕೆಯಾಗುತ್ತಿರುವ ಆರೋಪ ಕೇಳಿಬಂದಿದೆ.
ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಹೆಸರಲ್ಲಿ ಭತ್ಯೆ ಮಂಜೂರು ಮಾಡಿಸಿಕೊಳ್ಳುತ್ತಿರುವುದರ ಜತೆಗೆ ತಲಾ ಸಿಬ್ಬಂದಿಗೆ 40 ರಿಂದ 60 ರೂ. ವೆಚ್ಚದಲ್ಲಿ ಗುಣಮಟ್ಟವಿಲ್ಲದ ಊಟ ಕೊಟ್ಟು 200 ರೂ. ಲಪಟಾಯಿಸಲಾಗುತ್ತಿದೆ! ಅಧಿಕಾರಿಗಳ ಜೇಬು ಸೇರುತ್ತಿರುವ ಆಹಾರ ಭತ್ಯೆಯ ಹಣ ಸದ್ಬಳಕೆಯಾಗಲು ಸಮರ್ಪಕ ವ್ಯವಸ್ಥೆ ಜಾರಿಗೊಳಿಸುವಂತೆ ಪೊಲೀಸ್ ವಲಯದಿಂದ ಆಗ್ರಹ ವ್ಯಕ್ತವಾಗಿದೆ.
ಹಬ್ಬ ಹರಿದಿನ, ಗಣ್ಯ ವ್ಯಕ್ತಿಗಳ ಆಗಮನ, ಸಭೆ-ಸಮಾರಂಭ, ಚುನಾವಣೆ, ಪ್ರತಿಭಟನೆ, ಮೆರವಣಿಗೆ, ಬೆಂಗಳೂರು ಬಂದ್, ಕರ್ನಾಟಕ ಬಂದ್ ಹೀಗೆ ಪ್ರತಿನಿತ್ಯ ಒಂದಿಲ್ಲೊಂದು ಬಂದೋಬಸ್ತ್ಗೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬಂದೋಬಸ್ತ್ಗೆ ಬರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಊಟಕ್ಕಾಗಿ ಸರ್ಕಾರ ತಲಾ 200 ರೂ. ನಿಗದಿಪಡಿಸಿದೆ. ವಿಶೇಷ ಬಂದೋಬಸ್ತ್ನಲ್ಲಿ 500 ರಿಂದ 1,000 ಪೊಲೀಸರು ಭಾಗವಹಿಸುತ್ತಾರೆ. ತಲಾ 200 ರೂ.ನಂತೆ ಲೆಕ್ಕ ಹಾಕಿದರೆ 1 ರಿಂದ 2 ಲಕ್ಷ ರೂ. ಪಡೆದುಕೊಳ್ಳಲಾಗುತ್ತದೆ. ಆದರೆ, ತಲಾ ಸಿಬ್ಬಂದಿಗೆ ಕೇವಲ 40 ರಿಂದ 60 ರೂ. ಖರ್ಚು ಮಾಡಿ ಉಳಿದ ಹಣವನ್ನು ಕಬಳಿಸಲಾಗುತ್ತಿದೆ ಎಂದು ಖುದ್ದು ಪೊಲೀಸರೇ ಮಾಹಿತಿ ನೀಡುತ್ತಾರೆ. ಬಹುತೇಕ ಸಂದರ್ಭದಲ್ಲಿ ತಳ್ಳು ಗಾಡಿ ಅಥವಾ ಸಣ್ಣಪುಟ್ಟ ಹೋಟೆಲ್ಗಳಿಂದ ಬೆಳಗ್ಗೆ 30 ರೂ.ನ ಚೌಚೌ ಬಾತ್ ಹಾಗೂ ಮಧ್ಯಾಹ್ನಕ್ಕೆ 30 ರೂ.ನ ಪಲಾವ್ ಪೊಟ್ಟಣ ತಂದು ಕೊಡಲಾಗುತ್ತದೆ. ಒಬ್ಬ ಸಿಬ್ಬಂದಿಗೆ 60 ರೂ. ಖರ್ಚು ಮಾಡಿ ಉಳಿದ 140 ರೂ. ಆಯಾ ಘಟಕದ ಕ್ಲರಿಕಲ್ ಸಿಬ್ಬಂದಿ ಜೇಬಿಗಿಳಿಸುತ್ತಾರೆ. ಮತ್ತೆ ಕೆಲ ಸಂದರ್ಭದಲ್ಲಿ ಪೊಲೀಸರಿಗೆ ತಿಂಡಿ-ಊಟ ಕೊಡುವುದೇ ಇಲ್ಲ. ಆದಾಗ್ಯೂ ಬಂದೋಬಸ್ತ್ಗೆ ಬಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿಯನ್ನು ಪರಿಗಣಿಸಿ, ತಲಾ 200 ರೂ.ನಂತೆ ಆಹಾರ ಪೂರೈಸಿದವನ ಹೆಸರಲ್ಲಿ ಬಿಲ್ ಸೃಷ್ಟಿಸಿ ಆಹಾರ ಭತ್ಯೆ ಮಂಜೂರು ಮಾಡಿಸಿಕೊಂಡು ವಂಚಿಸಲಾಗುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳು, ಸಚಿವರು ಭಾಗವಹಿಸುವ ಕಾರ್ಯಕ್ರಮಗಳ ಬಂದೋಬಸ್ತ್ನಲ್ಲೂ ಅಕ್ರಮ ನಡೆಯುತ್ತಿದೆ. ಯಾವುದೋ ಜಿಲ್ಲೆಯಲ್ಲಿ ಆಯೋಜಿಸಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಬೆಳಗ್ಗೆ 11 ಗಂಟೆಗೆ ಭಾಗಿಯಾಗುವ ಮುಖ್ಯಮಂತ್ರಿಗಳು, ಮಧ್ಯಾಹ್ನ 12 ಅಥವಾ 12.30ಕ್ಕೆ ಕಾರ್ಯಕ್ರಮ ಮುಗಿಸಿ ಹೊರಟು ಹೋಗುತ್ತಾರೆ. ಸಿಎಂ ನಿರ್ಗಮಿಸಿದ ನಂತರ ಬಂದೋಬಸ್ತ್ಗೆ ಬಂದಿರುವ ಪೊಲೀಸರನ್ನು ಬಿಡುಗಡೆಗೊಳಿಸಲಾಗುತ್ತದೆ. ಆದರೆ, ಸಿಬ್ಬಂದಿಗೆ ಬೆಳಗಿನ ತಿಂಡಿಯನ್ನಷ್ಟೇ ಕೊಟ್ಟು 200 ರೂ. ಆಹಾರ ಭತ್ಯೆ ಕ್ಲೈಂ ಮಾಡಲಾಗುತ್ತಿದೆ. ತಿಂಡಿಗೆ 50 ರೂ. ಎಂದುಕೊಂಡರೂ ಉಳಿದ 150 ರೂಪಾಯಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೂ ಸೇರದೆ ಸರ್ಕಾರಕ್ಕೂ ಉಳಿತಾಯವಾಗದೆ ಅಧಿಕಾರಿಗಳು ಹಾಗೂ ಆಡಳಿತ ಕಚೇರಿಯ ಮಿನಿಸ್ಟ್ರಿಯಲ್ ಸಿಬ್ಬಂದಿಯ ಪಾಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಚರ್ಚೆ: ವಿಧಾನಸಭಾ ಚುನಾವಣೆ ವೇಳೆ 5 ದಿನ ಕರ್ತವ್ಯ ನಿರ್ವಹಿಸಿದ್ದ ಕಾನ್ಸ್ಟೆಬಲ್ನಿಂದ ಸಬ್ ಇನ್ಸ್ಪೆಕ್ಟರ್ವರೆಗೆ ಒಬ್ಬರಿಗೆ ಚುನಾವಣಾ ಗೌರವಧನ ಹಾಗೂ ಆಹಾರ ಭತ್ಯೆಯಾಗಿ ಅವರ ಬ್ಯಾಂಕ್ ಖಾತೆಗೆ 3,750 ರೂ. ಜಮೆ ಮಾಡಬೇಕಿತ್ತು. ಆದರೆ, ಚುನಾವಣಾ ಗೌರವಧನ 2,500 ರೂ. ಮಾತ್ರ ನೀಡಲಾಗಿತ್ತು. ಆಹಾರ ಭತ್ಯೆಯಾಗಿ ಕೊಡಬೇಕಿದ್ದ 1,250 ರೂ. ಹಾಕಿಲ್ಲ. ಈ ಬಗ್ಗೆ ಆಗ ಪೊಲೀಸ್ ಸಿಬ್ಬಂದಿಯ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಭಾರಿ ಚರ್ಚೆಯಾಗಿತ್ತು.
ಪೊಲೀಸರಿಗೆ ನೀಡಲಾಗುತ್ತಿರುವ ಆಹಾರ ಭತ್ಯೆ ದುರ್ಬಳಕೆ ಯಾಗುತ್ತಿರುವ ಆರೋಪದ ಕುರಿತು ಪರಿಶೀಲನೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. | ಡಾ.ಜಿ. ಪರಮೇಶ್ವರ, ಗೃಹಸಚಿವ
ಕಳಪೆ ಆಹಾರಕ್ಕೆ ಜಿಎಸ್ಟಿ ಬಿಲ್!: ಪ್ರತಿ ಜಿಲ್ಲೆಯಲ್ಲಿ ಜಿಎಸ್ಟಿ ಸಮೇತ ಬಿಲ್ ಕೊಟ್ಟು ಪೊಲೀಸರಿಗೆ ಕಳಪೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿದ್ದಾರೆ. ಅಧಿಕಾರಿ ಅಥವಾ ಕೇಸ್ ವರ್ಕರ್ ಹೇಳುವಂತೆ ಬಿಲ್ ತಯಾರಿಸಿ, ತನಗೆ ಬರಬೇಕಾದ ಹಣವನ್ನು ಪಡೆದುಕೊಂಡು ಉಳಿದ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವ ಒಪ್ಪಂದ ಆಗಿರುತ್ತದೆ ಎಂದು ಪೊಲೀಸ್ ಸಿಬ್ಬಂದಿಯೇ ಅಳಲು ತೋಡಿಕೊಂಡಿದ್ದಾರೆ. ಗೃಹಸಚಿವರಿಗೆ ದೂರು: 2023ರ ವಿಧಾನಸಭಾ ಎಲೆಕ್ಷನ್ಗೆ ನಿಯೋಜಿಸಿದ್ದ ಪೊಲೀಸರಿಗೆ ಕೊಡಬೇಕಿದ್ದ ತಲಾ 1,250 ರೂ. ಆಹಾರ ಭತ್ಯೆಯನ್ನು ಹಾಸನ ಜಿಲ್ಲೆ ಹೊರತು ಇತರ ಜಿಲ್ಲೆಯವರಿಗೆ ನೀಡಿಲ್ಲ. ಈ ಬಗ್ಗೆ ತನಿಖೆ ನಡೆಸುವ ಜತೆಗೆ ಆಹಾರ ಭತ್ಯೆ ತಲುಪಲು ನಿಯಮ ರೂಪಿಸಲು ಗೃಹಸಚಿವ ಡಾ.ಜಿ. ಪರಮೇಶ್ವರ ಅವರಿಗೆ ಸಿಬ್ಬಂದಿ ದೂರು ಕೊಟ್ಟಿದ್ದಾರೆ.