

ನಿಜಕ್ಕೂ ಇದು ದುರದೃಷ್ಟಕರ ಬೆಳವಣಿಗೆ. ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಮಿತಿಮೀರಿದ್ದು, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತ ಎಂದೇ ಹೇಳಬಹುದು. ಈ ಕುರಿತಾದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ತಮಿಳುನಾಡು ವಿಧಾನಸಭೆ ಅಂಗೀಕರಿಸಿರುವ 10 ವಿಧೇಯಕಗಳನ್ನು ತಮ್ಮ ಬಳಿಯೇ ಬಾಕಿ ಇರಿಸಿಕೊಂಡಿರುವ ತಮಿಳುನಾಡು ರಾಜ್ಯಪಾಲ, ಮಾಜಿ ಐಎಎಸ್ ಅಧಿಕಾರಿ ಆರ್.ಎನ್. ರವಿ ಅವರ ಕ್ರಮ ಸಮರ್ಥನಿಯವಲ್ಲ ಎಂದಿದೆ.
ಮಾತ್ರವಲ್ಲ, ‘ರಾಜ್ಯಪಾಲರು ಓರ್ವ ಸ್ನೇಹಿತನಂತೆ, ದಾರ್ಶನಿಕ ಮತ್ತು ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡಬಾರದು’ ಎಂದಿದೆ. ವಿಧಾನಸಭೆ ಕಳಿಸುವ ವಿಧೇಯಕಗಳನ್ನು ಒಂದು ತಿಂಗಳ ಒಳಗೆ ಇತ್ಯರ್ಥ ಪಡಿಸುವಂತೆಯೂ ಸೂಚಿಸಿದೆ. ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ಆಕ್ಷೇಪಗಳಿದ್ದರೆ, ಅನುಮಾನಗಳಿದ್ದರೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಅದನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕೆ ಹೊರತು, ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ಕಾಯುವಂತೆ ಮಾಡಬಾರದು. ಇದರಿಂದ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ‘ನೀವು ಬೆಂಕಿಯೊಡನೆ ಆಟವಾಡುತ್ತಿದ್ದೀರಿ’ ಎಂದು ಸುಪ್ರೀಂ ಕೋರ್ಟ್ 2023ರಲ್ಲೂ ರಾಜ್ಯಪಾಲರಿಗೆ ಎಚ್ಚರಿಸಿತ್ತು.
ಇಲ್ಲಿ ಆಯಾ ರಾಜ್ಯ ಸರ್ಕಾರಗಳು ಕೂಡ ಎಚ್ಚರಿಕೆ ವಹಿಸಬೇಕು. ಕಾನೂನು ರೂಪಿಸುವ ಅಧಿಕಾರವನ್ನು ರಚನಾತ್ಮಕವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆ ಹೊರತು ಅದು ವಿರೋಧಿಗಳನ್ನು ಹಣಿಯುವ ರಾಜಕೀಯದ ಅಸ್ತ್ರವಾಗಬಾರದು. ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರ್ಕಾರ ನಡುವಿನ ಸಂಘರ್ಷ ತೀವ್ರಸ್ವರೂಪ ಪಡೆದುಕೊಂಡಿರುವುದಕ್ಕೆ ಇದೇ ಕಾರಣ. ಇನ್ನು, ರಾಜ್ಯಪಾಲರು ಕೂಡ ವಿರೋಧಕ್ಕಾಗಿ ವಿರೋಧ ಎಂಬ ನಡೆಯನ್ನು ಅನುಸರಿಸಬಾರದು. ಸುಪ್ರೀಂ ಕೋರ್ಟ್ ಈ ಹಿಂದೆಯೂ ಹೇಳಿರುವಂತೆ, ‘ಅಂತರಾತ್ಮದಲ್ಲಿ ಇಣುಕಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು’. ಕೇರಳದಲ್ಲಂತೂ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಬಹಿರಂಗವಾಗಿಯೇ ನಡೆಯಿತು. ‘ಲೋಕಾಯುಕ್ತ ತಿದ್ದುಪಡಿ ಮಸೂದೆ’ ಮತ್ತು ‘ಕೇರಳ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ’ಗಳಿಗೆ ಯಾವುದೇ ಕಾರಣಕ್ಕೂ ಅಂಕಿತ ಹಾಕುವುದಿಲ್ಲ ಎಂದು ರಾಜ್ಯಪಾಲರು ಬಹಿರಂಗವಾಗಿಯೇ ಹೇಳಿದ್ದರು.
ಪಶ್ಚಿಮ ಬಂಗಾಳ, ಪಂಜಾಬ್ ಸೇರಿ ಕೆಲ ರಾಜ್ಯಗಳಲ್ಲಿ ಇದೇ ರೀತಿಯ ಸಮಸ್ಯೆ ಇದೆ. ಇದು ಸೌಹಾರ್ದಯುತ ಮಾರ್ಗದಲ್ಲಿ ಬಗೆಹರಿಯಬೇಕು. ರಾಜ್ಯಪಾಲರ ಕಚೇರಿಗಳು ರಾಜಕೀಯ ಚಟುವಟಿಕೆಗಳ ಅಥವಾ ರಾಜಕೀಯ ಸಂಘರ್ಷದ ತಾಣವಾಗಬಾರದು. ಹೀಗಾದಲ್ಲಿ ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ. ರಾಜ್ಯಪಾಲರ ಅಧಿಕಾರದ ವ್ಯಾಪ್ತಿಯನ್ನು ಸರ್ಕಾರ ಅತಿಕ್ರಮಿಸಬಾರದು. ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ವಿವಿಧ ರಾಜ್ಯ ಸರ್ಕಾರಗಳು ಯತ್ನಿಸುತ್ತಿರುವುದು, ವಿವಾದವನ್ನು ಹೆಚ್ಚಿಸಿದೆ. ಒಟ್ಟಾರೆ, ಎರಡೂ ಕಡೆ ಸಂಯಮ ಹಾಗೂ ಕಾನೂನಿನ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯವಾಗಿದೆ. ಸುಪ್ರೀಂ ಕೋರ್ಟ್ನ ತೀರ್ಪನ್ನು ಪರಾಮಶಿಸಿ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರು ಸಂಯಮ, ಸುವ್ಯವಸ್ಥೆಯ ಸ್ವಯಂ ಲಕ್ಷ್ಮಣರೇಖೆ ಹಾಕಿಕೊಳ್ಳುವುದು ಉತ್ತಮ.