

ಹರಿಯಾಣ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಅಕ್ಟೋಬರ್ 05ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 08ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜಕೀಯ ಪಕ್ಷಗಳು ಮತಬೇಟೆಗೆ ಇಳಿದಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇದೆಲ್ಲದರ ನಡುವೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದ್ದು, ಇನ್ಮುಂದೆ ಸಮಾವೇಶಗಳಿಗೆ ಶಾಲಾ-ಕಾಲೇಜುಗಳ ಮೈದಾನವನ್ನು ಬಳಸದಂತೆ ಆದೇಶ ಹೊರಡಿಸಿದೆ.
ಹರಿಯಾಣ ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ರ್‍ಯಾಲಿಗಳಿಗೆ ಶಾಲಾ ಮತ್ತು ಕಾಲೇಜು ಆಟದ ಮೈದಾನಗಳನ್ನು ಬಳಸಲು ಚುನಾವಣಾ ಆಯೋಗವು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಸಹ ನೀಡಿದ್ದಾರೆ.
ಈ ನಿಷೇಧವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪಿನ ಅನುಸಾರವಾಗಿದೆ. ಚುನಾವಣಾ ಪ್ರಚಾರದ ವೇಳೆ ಜಾತಿ, ಧರ್ಮ ಅಥವಾ ಸಮುದಾಯದ ಆಧಾರದಲ್ಲಿ ಮತದಾರರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಸಂವಿಧಾನದ ಪರಿಚ್ಛೇದ 19 (1) (ಎ) ಅಡಿಯಲ್ಲಿ ಭಾರತದ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ, ಆದರೆ ಮಾದರಿ ನೀತಿ ಸಂಹಿತೆಯ ಉದ್ದೇಶವನ್ನು ಅದರ ವಿವಿಧ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಸ್ಥಳಗಳಾದ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಅಥವಾ ಗುರುದ್ವಾರಗಳನ್ನು ಪ್ರಚಾರದ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಈ ಸ್ಥಳಗಳಲ್ಲಿ ಭಾಷಣಗಳು, ಪೋಸ್ಟರ್‌ಗಳು, ಹಾಡುಗಳು ಅಥವಾ ಯಾವುದೇ ಚುನಾವಣಾ ಸಂಬಂಧಿತ ವಸ್ತುಗಳನ್ನು ಬಳಸಬಾರದು ಎಂದು ಹರಿಯಾಣ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.