

ಚೆನ್ನೈ: ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ಬಳಿಕ ತಂಡದಲ್ಲಿ ಹಲವು ಬದಲಾವಣೆಗಳಾಗಿದ್ದು, ಹಾರ್ದಿಕ್ ಪಾಂಡ್ಯರನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಲು ಫಿಟ್ನೆಸ್ ಮುಖ್ಯ ಕಾರಣ ಎಂದು ಹೇಳಲಾಗಿದ್ದು, ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಸ್ ಸರಣಿಗೆ ಅವರು ರೆಡ್ಬಾಲ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ಧಾರೆ ಎಂದು ಹೇಳಲಾಗಿತ್ತಾದರೂ ಆಯ್ಕೆ ಸಮಿತಿ ಪಾಂಡ್ಯರಿಗೆ ಮಣೆ ಹಾಕಿರಲಿಲ್ಲ.
2018ರಲ್ಲಿ ಭಾರತದ ಪರ ಕೊನೆಯದಾಗಿ ಟೆಸ್ಟ್ ಪಂದ್ಯವಾಡಿರುವ ಪಾಂಡ್ಯ ಆ ಬಳಿಕ ರೆಡ್ಬಾಲ್ ಕ್ರಿಕೆಟ್ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಮಾತನಾಡಿದ್ದು, ಪಾಂಡ್ಯ ಬೌಲಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಆತ ತಾಬು ರೆಡ್ಬಾಲ್ ಕ್ರಿಕೆಟ್ನಲ್ಲಿ ಆಡಬಲ್ಲೇ ಎನಿಸಿದರೆ ಕಮ್ಬ್ಯಾಕ್ಗೆ ಇದು ಸೂಕ್ತ ಸಮಯ ಎನಿಸುತ್ತದೆ. ಇಲ್ಲವಾದಲ್ಲಿ ಗಾಯದ ಸಮಸ್ಯೆಯಿಂದಾಗಿ ಆತ ಮತ್ತೊಮ್ಮೆ ಗಾಯಕ್ಕೆ ತುತ್ತಾದರೆ ಸೀಮಿತ ಓವರ್ಗಳ ಕ್ರಿಕೆಟ್ಗೆ ಅಲಭ್ಯನಾಗುತ್ತಾನೆ. ಆತನ ಕಮ್ಬ್ಯಾಕ್ ಅವನ ಮನಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅದು ಭಾರತದ ದೃಷ್ಟಿಕೋನದಿಂದ ಸೂಕ್ತವಾಗಿರುತ್ತದೆ. ಆತನ ದೇಹದ ಬಗ್ಗೆ ನಮ್ಮಗಿಂತ ಆತನಿಗೆ ಹೆಚ್ಚಾಗಿ ತಿಳಿದಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಬದಲಾಗಿ ಶುಭಮನ್ ಗಿಲ್ ಅವರನ್ನು ಉಪನಾಯಕನಾಗಿ ನೇಮಿಸಲಾಗಿತ್ತು. ಹಾರ್ದಿಕ್ ಫಿಟ್ನೆಸ್ ಹಾಗೂ ಗಾಯದ ಸಮಸ್ಯೆಯೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದ್ದು, ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ಗೆ ಪಾಂಡ್ಯ ತಂಡಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.